ADVERTISEMENT

ಯಡಿಯೂರಪ್ಪ ಬದಲಾವಣೆಗೆ ಶಾಸಕರು ದೆಹಲಿಗೆ ಹೋಗಿದ್ದು ನಿಜ: ಕೆ.ಎಸ್‌.ಈಶ್ವರಪ್ಪ

ಅರುಣ್‌ ಸಿಂಗ್‌ ಭೇಟಿಗೆ ಮೊದಲೇ ಸಂಚಲನ ಸೃಷ್ಟಿಸಿದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 10:35 IST
Last Updated 16 ಜೂನ್ 2021, 10:35 IST
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ    

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದು ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಾಯಕತ್ವ ಬದಲಾವಣೆಗಾಗಿ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಸಂಘರ್ಷಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಅವರ ರಾಜ್ಯದ ಭೇಟಿಗೆ ಮೊದಲೇ ಈಶ್ವರಪ್ಪ ಅವರು ಈ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕೆಲವು ಶಾಸಕರು ದೆಹಲಿಗೆ ಹೋಗಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡಿ ಎಂಬ ಬೇಡಿಕೆ ಇಟ್ಟಿರುವುದು ಸತ್ಯ. ಯಡಿಯೂರಪ್ಪನವರೇ 2ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಇನ್ನು ಕೆಲವರು ಬದಲಾಯಿಸಬೇಕು ಎನ್ನುತ್ತಿದ್ದಾರೆ. ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ADVERTISEMENT

ಯಡಿಯೂರಪ್ಪ ಮುಂದುವರಿಯಬೇಕೋ ಉಳಿಯಬೇಕೋ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಏನು ಬೇಕಾದರೂ ಆಗಬಹುದು. ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅರುಣ್‌ ಸಿಂಗ್ ಅವರು ಬಂದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ವಲಸೆ ಬಂದ 17 ಶಾಸಕರಿಂದ ಗೊಂದಲ ಆಗಿದೆ ಎಂದು ಎಲ್ಲೂ ಹೇಳಿಲ್ಲ. ಮೊದಲು ನಮಗೆ ಬಹುಮತ ಇರಲಿಲ್ಲ. ಅವರು ಬಂದಿದ್ದರಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.

ನಾಯಕತ್ವ ಬದಲಾವಣೆ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಅವರು ರಾಜ್ಯಕ್ಕೆ ಬರುತ್ತಿಲ್ಲ. ಪಕ್ಷದ ಸಭೆಯಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ವರಿಷ್ಠರು ಯಡಿಯೂರಪ್ಪ ಅವರನ್ನೇ ಮುಂದುವರಿಸಲು ತೀರ್ಮಾನಿಸಿರುವಾಗ, ನಾಯಕತ್ವ ಬದಲಾವಣೆ ಎಂಬ ಮಾತುಗಳು ಕೇವಲ ಊಹಾಪೋಹ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.