
ವಿಧಾನ ಪರಿಷತ್
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನಲ್ಲಿ ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರಗಳ ಮಾಹಿತಿ ಇಲ್ಲಿದೆ
ರಾಜ್ಯದಲ್ಲಿ 37 ಲಕ್ಷ ವಸತಿರಹಿತರು ಇದ್ದಾರೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳಲ್ಲಿ ಹಲವು ಸಿದ್ಧವಾಗಿವೆ. ಜನವರಿ ವೇಳೆಗೆ 42,000 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ಉಳಿದ ಮನೆಗಳನ್ನೂ ಶೀಘ್ರವೇ ಫಲಾನುಭವಿಗಳಿಗೆ ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸರ್ಕಾರವು ಈಗ ₹1.20 ಲಕ್ಷ ಸಹಾಯಧನ ನೀಡುತ್ತಿದ್ದು, ಅದನ್ನು ₹4 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಅವರ ಜತೆಗೆ ಚರ್ಚಿಸಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ.
–ವಸತಿ ಸಚಿವ ಜಮೀರ್ ಅಹಮದ್ ಖಾನ್, ಪ್ರಶ್ನೆ: ನಾಮ ನಿರ್ದೇಶಿತ ಸದಸ್ಯ ಶಿವಕುಮಾರ್ ಕೆ. ಮತ್ತು ಕಾಂಗ್ರೆಸ್‌ನ ಕೆ.ಗೋವಿಂದರಾಜು
ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಭೂ ಪರಿವರ್ತನೆ ಪ್ರಕ್ರಿಯೆ ಸ್ವಯಂಚಾಲಿತವಾಗಿ ಆಗುವ ವ್ಯವಸ್ಥೆಯನ್ನು ಒಂದು ತಿಂಗಳಲ್ಲಿ ಜಾರಿಗೆ ತರುತ್ತೇವೆ. ಇದಕ್ಕೆ ಸಂಬಂಧಿಸಿದ ಎಲ್ಲ ತಾಂತ್ರಿಕ ಕೆಲಸಗಳು ನಡೆದಿವೆ. ಎಂಎಸ್‌ಎಂಇಗಳು ಗರಿಷ್ಠ 2 ಎಕರೆವರೆಗಿನ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಿಸಲು ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕಿಲ್ಲ. ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೂ ಭೂಪರಿವರ್ತನೆ ಅಗತ್ಯವಿಲ್ಲ. ಮಾಸ್ಟರ್ ಪ್ಲ್ಯಾನ್‌ನ ಹೊರಗೆ ಇರುವ ಜಮೀನುಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ 15 ದಿನದಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ, ಅಗತ್ಯ ವಿವರಣೆ ಪಡೆದುಕೊಳ್ಳಬೇಕು. 30 ದಿನಗಳ ಒಳಗೆ ಅರ್ಜಿಯನ್ನು ಪುರಸ್ಕರಿಸಬೇಕು ಇಲ್ಲವೇ ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ, ನೂತನ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಭೂಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ.
–ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್
ಪಶು ಸಂಗೋಪನ ಇಲಾಖೆಯಲ್ಲಿ ಒಟ್ಟು 18,562 ಹುದ್ದೆಗಳು ಮಂಜೂರಾಗಿದ್ದು, 7,180 ಹುದ್ದೆಗಳಷ್ಟೇ ಭರ್ತಿಯಾಗಿವೆ. ಗುತ್ತಿಗೆ ಸಿಬ್ಬಂದಿ ಹೊರತುಪಡಿಸಿ 7,484 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪಶು ವೈದ್ಯರದ್ದೇ ಹೆಚ್ಚಿನ ಸಂಖ್ಯೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದರು.
5,000 ಜಾನುವಾರುಗಳಿಗೆ ಒಬ್ಬ ಪಶುವೈದ್ಯ ಇರಬೇಕು ಎಂಬುದು ಜಾಗತಿಕ ನಿಯಮ
25,000 ಜಾನುವಾರುಗಳಿಗೆ ಒಬ್ಬ ಪಶುವೈದ್ಯ ಇರಬೇಕು ಎಂಬುದು ಭಾರತದ ನಿಯಮ
40,000 ಜಾನುವಾರುಗಳಿಗೆ ಒಬ್ಬ ಪಶುವೈದ್ಯ. ಇದು ಕರ್ನಾಟಕದ ಸ್ಥಿತಿ
8.98 ಕೋಟಿ ರಾಜ್ಯದಲ್ಲಿರುವ ಜಾನುವಾರುಗಳು
4,342 ರಾಜ್ಯದಲ್ಲಿರುವ ಪಶು ಚಿಕಿತ್ಸಾಲಯಗಳು
3,321 ಈ ಚಿಕಿತ್ಸಾಲಯಗಳಲ್ಲಿ ಇರುವ ಪಶು ವೈದ್ಯರ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.