ADVERTISEMENT

ರಮೇಶ ಜಾರಕಿಹೊಳಿ ವಿರುದ್ಧ ಎಫ್ಐಆರ್: ಲೈಂಗಿಕ ದೌರ್ಜನ್ಯ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 12:52 IST
Last Updated 26 ಮಾರ್ಚ್ 2021, 12:52 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಸಿ.ಡಿ. ಪ್ರಕರಣ ಬಯಲಾದ 24 ದಿನಗಳ ನಂತರ ಯುವತಿ ದೂರು ಆಧರಿಸಿ ಬಿಜೆಪಿ ಶಾಸಕ ರಮೇಶ ಜಾರಕಹೊಳಿ ವಿರುದ್ಧ ನಗರದ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಮತ್ತೊಂದು ಮಹಾ ತಿರುವು ಸಿಕ್ಕಂತಾಗಿದೆ.

‘ಕೆಲಸ ಕೊಡಿಸುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಯುವತಿ, ವಕೀಲ ಕೆ.ಎನ್. ಜಗದೀಶ್ ಕುಮಾರ್ ಮೂಲಕ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು.

ದೂರು ಪರಿಶೀಲನೆ ನಡೆಸಿದ್ದ ಕಮಿಷನರ್, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರನ್ವಯ ಇದೀಗ ದೂರು ದಾಖಲಾಗಿದ್ದು, ರಮೇಶ ಜಾರಕಿಹೊಳಿ ಅವರನ್ನೇ ಆರೋಪಿಯನ್ನಾಗಿ ಮಾಡಲಾಗಿದೆ.

‘ಉದ್ದೇಶಪೂರ್ವಕ ಲೈಂಗಿಕ ದೌರ್ಜನ್ಯ (ಐಪಿಸಿ 354 ಎ), ಜೀವ ಬೆದರಿಕೆ (ಐಪಿಸಿ 506), ಅವಾಚ್ಯ ಶಬ್ದಗಳಿಂದ ಬೈದಿರುವ (ಐಪಿಸಿ 504), ಅಧಿಕಾರದಲ್ಲಿ ದುರುಪಯೋಗಪಡಿಸಿಕೊಂಡು ಅತ್ಯಾಚಾರ (376–ಸಿ), ನೌಕರಿ ಕೊಡಿಸುವುದಾಗಿ ವಂಚನೆ (ಐಪಿಸಿ 417) ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT