ADVERTISEMENT

ಲೈಂಗಿಕ ದೌರ್ಜನ್ಯ: ಇಬ್ಬರಿಗೆ 20 ವರ್ಷ ಜೈಲು, ದಂಡ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದರಿಂದ, ಇಬ್ಬರು ಅಪರಾಧಿಗಳಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯವು ತಲಾ 20 ವರ್ಷ ಜೈಲು ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿದೆ.

ಮೈಸೂರಿನ ಜೈಶಿವಮಹದೇವ (50) ಹಾಗೂ ಕೈಸರ್‌ ಪಾಷಾ (30) ಶಿಕ್ಷೆಗೆ ಗುರಿಯಾದವರು.

2019ರ ಮಾರ್ಚ್‌ 30ರಂದು ಸಂಜೆ ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರಿಗೆ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿ, ಜೈಶಿವಮಹದೇವ ಎಂಬಾತ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಉದ್ಯಾನವೊಂದರ ಬಳಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಗ ಸ್ಥಳಕ್ಕೆ ಬಂದ ಕೈಸರ್‌, ಜೈಶಿವಮಹದೇವನನ್ನು ಓಡಿಸಿದ್ದಾನೆ. ಬಾಲಕಿಯರನ್ನು ಮನೆಗೆ ಬಿಡುವುದಾಗಿ ನಂಬಿಸಿ, ಈತನೂ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ADVERTISEMENT

ಈ ಮಕ್ಕಳಿಬ್ಬರೂ ಸ್ನೇಹಿತೆಯರಾಗಿದ್ದು, ಅಂದು ರಾತ್ರಿ ಹತ್ತೂವರೆ ಸುಮಾರಿಗೆ ಗಾಬರಿಯಿಂದ ಮನೆಗೆ ಬಂದಾಗ ಪೋಷಕರಿಗೆ ವಿಷಯ ಗೊತ್ತಾಗಿದೆ. ಪೋಷಕರು ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ಇಬ್ಬರೂ ತಪ್ಪಿತಸ್ಥರೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಯರಿಗೆ ₹ 4 ಲಕ್ಷ ಪರಿಹಾರ ನೀಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.