ADVERTISEMENT

Video: ಶಿವಮೂರ್ತಿ ಮುರುಘಾ ಶರಣರ ಪ್ರತಿಮೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 18:49 IST
Last Updated 29 ಆಗಸ್ಟ್ 2022, 18:49 IST
   

ಹೊಳಲ್ಕೆರೆ (ಚಿತ್ರದುರ್ಗ): ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ನಿರ್ಮಿಸಲಾಗಿದ್ದ ಶಿವಮೂರ್ತಿ ಮುರುಘಾ ಶರಣರ ಪ್ರತಿಮೆಯನ್ನು ಗ್ರಾಮಸ್ಥರು ಸೋಮವಾರ ಧ್ವಂಸಗೊಳಿಸಿದ್ದಾರೆ.

ಮಲ್ಲಾಡಿಹಳ್ಳಿ, ಕೆಂಗುಂಟೆ, ದುಮ್ಮಿ, ರಾಮಘಟ್ಟ ಸೇರಿದಂತೆ ಸುತ್ತಲಿನ ಗ್ರಾಮದ ಯುವಕರ ಗುಂಪು ಆಶ್ರಮ ಪ್ರವೇಶಿಸಿ ಶಿವಮೂರ್ತಿ ಶರಣರ ಫೋಟೋಗಳನ್ನು ಹೊರಗೆ ತಂದು ಶವಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಗ್ರಾಮದ ಮುಖ್ಯವೃತ್ತದಲ್ಲಿ ಶಿವಮೂರ್ತಿ ಶರಣರ ಫೋಟೋಗಳನ್ನು ಸುಟ್ಟು ಹಾಕಿದರು.

‘ರಾಘವೆಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿ ಆಶ್ರಮವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಆದರೆ ಶಿವಮೂರ್ತಿ ಮುರುಘಾ ಶರಣರು ಆಶ್ರಮದ ಅಧ್ಯಕ್ಷರಾಗಿ 15 ವರ್ಷ ಕಳೆದಿದ್ದು, ಯಾವುದೇ ಅಭಿವೃದ್ಧಿ ಆಗಿಲ್ಲ. ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಆಗಿದೆ. ಆಶ್ರಮದ ಆವರಣದಲ್ಲಿ ದನಕರುಗಳು ಮೇಯುವ ದುಸ್ಥಿತಿ ಬಂದಿದೆ. ಆಶ್ರಮಕ್ಕೆ ವರ್ಷಕ್ಕೆ ₹ 9 ಕೋಟಿ ಆದಾಯ ಬರುತ್ತಿದ್ದು, ಹಣ ದುರುಪಯೋಗ ಮಾಡಲಾಗಿದೆ’ ಎಂದು ರೈತ ಮುಖಂಡ ಸಂತೋಷ್, ಕೆಂಗುಂಟೆ ಓಂಕಾರಪ್ಪ, ಅಮೀರ್, ಅಭಿಷೇಕ್, ರಂಗನಾಥ್, ಚೇತನ್ ಆರೋಪಿಸಿದರು.

ADVERTISEMENT

‘ಆಶ್ರಮದ ಟ್ರಸ್ಟಿಗಳೂ ಸರಿಯಾಗಿ ಆಶ್ರಮಕ್ಕೆ ಬರುವುದಿಲ್ಲ. ಮಲ್ಲಾಡಿ ಹಳ್ಳಿ ಆಶ್ರಮ ಸಿಸ್ತಿಗೆ ಹೆಸರಾಗಿತ್ತು. ಈಗ ಆಶ್ರಮದಲ್ಲಿ ಯಾವುದೇ ಶಿಸ್ತು ಇಲ್ಲ. ಕಳಂಕ ಹೊತ್ತಿರುವ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಯುವಕರ ಗುಂಪು ಆಗ್ರಹಿಸಿತು.

ಅಶ್ರಮಕ್ಕೂ, ಮಠಕ್ಕೂ ಸಂಬಂಧವಿಲ್ಲ: ಸಮಿತಿ ಸ್ಪಷ್ಟನೆ
ಚಿತ್ರದುರ್ಗ: ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮಕ್ಕೂ ಚಿತ್ರದುರ್ಗದ ಮುರುಘಾ ಮಠಕ್ಕೂ ಆರ್ಥಿಕ, ಆಡಳಿತಾತ್ಮಕ ಹಾಗೂ ವ್ಯವಹಾರಿಕವಾಗಿ ಯಾವುದೇ ಸಂಬಂಧವಿಲ್ಲ ಎಂದು ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಸ್ಪಷ್ಟಪಡಿಸಿದೆ.

‘ಆಶ್ರಮದ ಟ್ರಸ್ಟಿಗಳಲ್ಲಿ ಒಬ್ಬರಾಗಿರುವ ಶಿವಮೂರ್ತಿ ಮುರುಘಾ ಶರಣರು ಆಶ್ರಮದ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಅದು ಗೌರವದಿಂದ ನೀಡಲಾದ ಸ್ಥಾನ. ಇತ್ತೀಚಿನ ಬೆಳವಣಿಗೆಗಳಿಂದ ಆಶ್ರಮದ ಘನತೆಗೆ ಧಕ್ಕೆ ಉಂಟಾಗಿದ್ದು, ಶೀಘ್ರ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಗೌರವ ಕಾರ್ಯದರ್ಶಿ ಪ್ರೊ.ಕೆ.ಇ. ರಾಧಾಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.