ADVERTISEMENT

ಇಂಗ್ಲಿಷ್‌ ವ್ಯಾಮೋಹಕ್ಕೆ ಕಾರಣ ಕೀಳರಿಮೆ: ಸಂಶೋಧಕ ಷ. ಶೆಟ್ಟರ್‌

ಎಸ್.ಸೂರ್ಯಪ್ರಕಾಶ ಪಂಡಿತ್
Published 6 ಫೆಬ್ರುವರಿ 2020, 19:45 IST
Last Updated 6 ಫೆಬ್ರುವರಿ 2020, 19:45 IST
ಡಾ.ಷ.ಶೆಟ್ಟರ್‌
ಡಾ.ಷ.ಶೆಟ್ಟರ್‌   

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ‘ನಾವು ಇಂಗ್ಲಿಷ್ ಭಾಷೆಯನ್ನು ವ್ಯವಹಾರದ ಭಾಷೆಯನ್ನಾಗಿ ಸ್ವೀಕರಿಸಿರುವುದು ಕೀಳರಿಮೆಯ ಪ್ರತಿಬಿಂಬ’ ಎಂದು ಸಂಶೋಧಕ ಷ. ಶೆಟ್ಟರ್‌ ವಿಷಾದಿಸಿದರು.

‘ಕನ್ನಡ ಉಳಿಸಿ ಬೆಳಸುವ ಬಗೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ನಾವುಮನೆಗಳಲ್ಲಿ ಕನ್ನಡವನ್ನೇ ಮಾತನಾಡುತ್ತಿರುತ್ತೇವೆ. ಆದರೆ ರಸ್ತೆಗೆ ಬಂದಕೂಡಲೇ ಇಂಗ್ಲಿಷ್‌ನಲ್ಲಿ ಮಾತನಾಡಲು ತೊಡಗುತ್ತೇವೆ. ಇದು ನಮ್ಮಲ್ಲಿ ನೆಲೆಯೂರಿರುವ ಕೀಳರಿಮೆಗೆ ಸಂಕೇತವಲ್ಲದೆ ಮತ್ತೇನು ಎಂದು ಪ್ರಶ್ನಿಸುತ್ತ, ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡವನ್ನು ಬಳಸಲು ನಾವು ಹೆಮ್ಮೆ ಪಡಬೇಕು. ಬೆಂಗಳೂರಿನ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡವನ್ನು ಹಾಕಲಾಗುತ್ತಿದೆ. ಇದು ಕೀಳರಿಮೆಯಿಂದ ಉಂಟಾದ ಮಾನಸಿಕತೆಯಲ್ಲವೆ’ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಂದಲೂ ಅನೇಕ ಆಪತ್ತುಗಳನ್ನು ಎದುರಿಸಿಯೂ ಇಂದು ಜೀವಂತವಾಗಿದೆ; ಅಷ್ಟೇ ಅಲ್ಲ, ಸಮೃದ್ಧವಾಗಿಯೂ ಇದೆ. ಸಾಹಿತ್ಯ ಸಮ್ಮೇಳನದಲ್ಲಿ ಸೇರಿರುವ ಅಪಾರ ಜನಸಮೂಹವನ್ನು ನೋಡಿದರೆ ಕನ್ನಡವನ್ನು ಉಳಿಸುವುದು ಹೇಗೆ ಎನ್ನುವ ಪ್ರಶ್ನೆಯೇ ಏಳುವುದಿಲ್ಲ; ನಾವು ಈಗ ಕನ್ನಡವನ್ನು ಬೆಳಸುವ ಬಗೆ ಹೇಗೆಂದು ಯೋಚಿಸಬೇಕಾಗಿದೆಯಷ್ಟೆ ಎಂದೂ ಅವರು ಅಭಿಪ್ರಾಯಪಟ್ಟರು.

ADVERTISEMENT

ಮೊದಲಿಗೆ ಪ್ರಾಕೃತದ ಪ್ರಭಾವ, ಬಳಿಕ ಸಂಸ್ಕೃತದ ಪ್ರಭಾವ ಕನ್ನಡ ಮೇಲಾಯಿತು. ಆದರೆ ಕನ್ನಡ ಆ ಕಾರಣದಿಂದ ಸೊರಗಲಿಲ್ಲ. ಸಂಸ್ಕೃತದ ಸತ್ವವನ್ನು ಹೀರಿಕೊಂಡು ಅದು ಬೆಳೆ
ಯಿತು. ಅನಂತರ ಕರ್ನಾಟಕವನ್ನು ಆಳಿದ ರಾಜರು ಅವರ ಭಾಷೆಯನ್ನು ಇಲ್ಲಿ ಹೇರಿದರು. ಉದಾಹರಣೆಗೆ ತಮಿಳು. ಅನಂತರ ಮರಾಠಿ, ಪರ್ಶಿಯನ್‌, ಅರೆಬಿಕ್‌, ಇಂಗ್ಲಿಷ್‌, ಫ್ರೆಂಚ್‌ – ಹೀಗೆ ಹಲವು ಪ್ರಭುತ್ವದ ಭಾಷೆಗಳನ್ನು ಜೀರ್ಣಿಸಿಕೊಂಡು ಕನ್ನಡ ಬೆಳೆಯಿತು. ನಾವಿಲ್ಲಿ ಗಮನಿಸಬೇಕಾಗಿರುವುದು ನಮ್ಮ ಭಾಷೆಯ ಬಗ್ಗೆ ಕಾಳಜಿ ಮಾಡುವುದು ಎಂದರೆ ಅದು ಬೇರೊಂದು ಭಾಷೆಯನ್ನು ದ್ವೇಷಿಸುವುದಲ್ಲ; ಎಲ್ಲ ಭಾಷೆಗಳನ್ನೂ ಬರಮಾಡಿಕೊಂಡು ಅವುಗಳ ಸತ್ವದಲ್ಲಿ ನಮ್ಮ ಭಾಷೆಯನ್ನು ಬೆಳಸುವುದೇ ನಿಜವಾದ ಅಭಿಮಾನ. ಆದರೆ ಅಭಿಮಾನ ಬೇರೆ, ಆರಾಧನೆ ಬೇರೆ. ಈ ವ್ಯತ್ಯಾಸವನ್ನೂ ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಸೂಚಿಸಿದರು.

ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಈ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆದರೆ ಅನುದಾನದಿಂದಲೇ ಎಲ್ಲವೂ ಸಾಧ್ಯವಾಗದು. ಮಾಡುವ ಕೆಲಸವನ್ನು ಅರ್ಥಪೂರ್ಣವಾಗಿ ಮಾಡಬೇಕಿದೆ. ಹತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದೆ. ಆದರೆ ಕೆಲಸವನ್ನು ಸಾರ್ಥಕವಾಗಿ ಯೋಚಿಸಿ ಮುಂದುವರೆಸಿಕೊಂಡು ಹೋಗುವಂಥ ಒಂದು ಸಂಸ್ಥೆಯೇ ಇನ್ನೂ ರೂಪುಗೊಂಡಿಲ್ಲ. ಸರ್ಕಾರ ಮತ್ತು ಸಮಾಜ ಈ ವಿಷಯದಲ್ಲಿ ಹೊಣೆಗಾರಿಕೆಯಿಂದ ವರ್ತಿಸಬೇಕು; ಇಲ್ಲವಾದಲ್ಲಿ ನಮಗೆ ನಮ್ಮ ಭಾಷೆಯ ಬಗ್ಗೆ ತಾತ್ಸಾರ ಭಾವನೆಯ ಮಾತ್ರವೇ ಇದೆ ಎನ್ನುವುದನ್ನು ನಾವು ಘೋಷಿಸಿದಂತಾಗುತ್ತದೆ. ಕನ್ನಡ ಅತ್ಯಂತ ಪ್ರಾಚೀನ ಭಾಷೆ; ಅದು ಪ್ರಾಚೀನತೆಯ ವಿಷಯದಲ್ಲಿ ತಮಿಳನ ಜತೆ ಸ್ಪರ್ಧಿಸುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ ಎಂದರು.

‘ಹಿಂದೆ ಕನ್ನಡವನ್ನು ಬೆಳೆಸಿದವರಲ್ಲಿ ಅನೇಕರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದವರು. ಅವರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಆದರೆ ಇಂದು ಶಾಲಾಕಾಲೇಜುಗಳಲ್ಲಿ ಕನ್ನಡವನ್ನು ಕಲಿಸುತ್ತಿರುವ ಬೋಧಕರಿಗೇ ಕನ್ನಡ ಸರಿಯಾಗಿ ಬರುವುದಿಲ್ಲ. ಅಧ್ಯಾಪಕರು ಸಮರ್ಥವಾಗಿ ಕನ್ನಡವನ್ನು ಕಲಿಯಬೇಕು. ಕನ್ನಡವನ್ನು ಕಲಿಯುವವರ ಸಂಖ್ಯೆ ಕಡಿಮೆ ಆಗಿಲ್ಲ; ಕಲಿಸುವವರ ಗುಣಮಟ್ಟ ಕಡಿಮೆ ಆಗಿದೆ. ಪ್ರಾಧ್ಯಾಪಕರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕಿದೆ’ ಎಂದು ಅವರು ವಿಶ್ಲೇಷಿಸಿದರು.

ಗ್ರಾಮೀಣರಿಂದ ಕನ್ನಡದ ಉಳಿವು

ಇಂದು ಕನ್ನಡವನ್ನು ಉಳಿಸುತ್ತಿರುವವರು ಗ್ರಾಮೀಣ ಭಾಗದವರು. ಇವರ ಕನ್ನಡವನ್ನು ಬಳಸುತ್ತಿರುವವರೆಗೂ ಈ ಭಾಷೆಗೆ ಅಪಾಯವಿಲ್ಲ. ಅದರಲ್ಲೂ ಕಲ್ಯಾಣ ಕರ್ನಾಟಕದ ಕೊಡುಗೆ ವಿಶಿಷ್ಟವಾದುದು. ಮರಾಠಿ, ಪರ್ಶಿಯನ್, ಅರೆಬಿಕ್‌ ಮುಂತಾದ ಹಲವು ಭಾಷೆಗಳನ್ನು ಜೀರ್ಣಿಸಿಕೊಂಡು ಕನ್ನಡವನ್ನು ಉಳಿಸಿಕೊಂಡವರು ಈ ಭಾಗದ ಜನರು ಎಂದು ಷ. ಶೆಟ್ಟರ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.