ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ಬಂಧಿಸಬಾರದು’ ಎಂದು ಹೈಕೋರ್ಟ್ ಆದೇಶಿಸಿದೆ.
‘ನನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಎನ್.ರವಿಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ‘ಅರ್ಜಿದಾರರಿಗೆ ಮಹಿಳೆಯರ ಬಗ್ಗೆ ಗೌರವವಿದೆ. ಇದೊಂದು ರಾಜಕೀಯ ಪ್ರೇರಿತ ದೂರು. ಅರ್ಜಿದಾರರಿಗೆ ಮುಜುಗರ ಉಂಟು ಮಾಡಲು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಲಾಗಿದೆ. ಟಿ.ವಿಯಲ್ಲಿ ಬಂದ ಬ್ರೇಕಿಂಗ್ ನ್ಯೂಸ್ ಆಧರಿಸಿ ಈ ದೂರು ದಾಖಲಿಸಲಾಗಿದ್ದು ಎಫ್‌ಐಆರ್‌ಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ, ‘ರವಿಕುಮಾರ್‌ಗೆ ಅಪರಾಧಿಕ ಚಾಳಿ ಇದೆ. ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧವೂ ಇಂತಹ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಬಾರದು’ ಎಂದು ಪ್ರತಿಪಾದಿಸಿದರು.
ಒಂದು ಹಂತದಲ್ಲಿ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲು ಮುಂದಾಗಿದ್ದ ನ್ಯಾಯಪೀಠ ಅಂತಿಮವಾಗಿ ಪ್ರಾಸಿಕ್ಯೂಷನ್ ಪ್ರತಿಪಾದನೆಗೆ ಮನ್ನಣೆ ನೀಡಿ, ‘ಆರೋಪಿ ರವಿಕುಮಾರ್ ಅವರನ್ನು ಬಂಧಿಸಬಾರದು ಮತ್ತು ತನಿಖೆಗೆ ಸಹಕರಿಸಬೇಕು’ ಎಂಬ ಷರತ್ತಿನೊಂದಿಗೆ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿತು. ರವಿಕುಮಾರ್ ಪರ ಹೈಕೋರ್ಟ್ ವಕೀಲ ಸುಯೋಗ ಹೇರಳೆ ವಕಾಲತ್ತು ವಹಿಸಿದ್ದಾರೆ.
‘ರವಿಕುಮಾರ್ ಅವರು ಶಾಲಿನಿ ರಜನೀಶ್ ಕುರಿತು ಅಸಂಸದೀಯ ಪದ ಬಳಸಿ ಮಾತನಾಡಿರುವುದು ಇಡೀ ಮಹಿಳಾ ಕುಲಕ್ಕೆ ಅಗೌರವ ತೋರಿದಂತಾಗಿದೆ. ರವಿಕುಮಾರ್ ಅವರ ಮಾತುಗಳಲ್ಲಿ ಕಾಮ ವಾಸನೆ ಇದೆ’ ಎಂದು ಆರೋಪಿಸಿ ಜೆ.ಪಿ.ನಗರದ ‘ನಂದಾದೀಪಾ ಮಹಿಳಾ ಸಂಘ’ದ ಅಧ್ಯಕ್ಷೆ ನಾಗರತ್ನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಗುರುವಾರ (ಜುಲೈ 3) ದೂರು ನೀಡಿದ್ದರು. ಇದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ರವಿಕುಮಾರ್‌ಗೆ ನೋಟಿಸ್ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎನ್.ರವಿಕುಮಾರ್ ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮನ್ನಿಸಿದೆ.
ಶುಕ್ರವಾರ ಸಂಜೆ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.