ADVERTISEMENT

15 ದಿನಗಳಲ್ಲಿ ₹ 954 ಕೋಟಿ‌ ಕಬ್ಬಿನ ಬಾಕಿ ವಸೂಲಿ: ಶಂಕರ ಪಾಟೀಲ ಮುನೇನಕೊಪ್ಪ

​ಪ್ರಜಾವಾಣಿ ವಾರ್ತೆ
Published 11 ಮೇ 2022, 8:56 IST
Last Updated 11 ಮೇ 2022, 8:56 IST
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌   

ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿದ್ದ ಬಾಕಿ ಮೊತ್ತದಲ್ಲಿ ₹954 ಕೋಟಿಯನ್ನು ಮಾರ್ಚ್ ತಿಂಗಳ ಕೊನೆಯ 15 ದಿನಗಳಲ್ಲಿ ವಸೂಲಿ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌ ತಿಳಿಸಿದರು.

ರೈತರಿಗೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ಬುಧವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

2022ರ ಏಪ್ರಿಲ್ 15ಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿದ್ದ ಬಾಕಿ ₹ 2,389.94 ಕೋಟಿ ಇತ್ತು‌. ಬಾಕಿ ವಸೂಲಿಗೆ ಸಕ್ಕರೆ ಆಯುಕ್ತರು ನೋಟಿಸ್ ಜಾರಿಗೊಳಿಸಿದ್ದರು. ಏಪ್ರಿಲ್ 30ರ ವೇಳೆಗೆ ರೈತರಿಗೆ ₹954 ಕೋಟಿ ಪಾವತಿಸಿದ್ದು, ಈಗ ₹1,435.94 ಕೋಟಿ ಬಾಕಿ ಉಳಿದಿದೆ ಎಂದರು.

ADVERTISEMENT

ರೈತರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ ವಸೂಲಿಗೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಷ್ಟು ಬೇಗ ಉಳಿದ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧ್ಯಯನ ತಂಡ ರವಾನೆ: ರಾಜ್ಯದಲ್ಲಿ ಎಥೆನಾಲ್ ಉತ್ಪಾದನಾ ನೀತಿ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಜ್ಞರ ತಂಡವೊಂದನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ಬ್ರೆಜಿಲ್ ದೇಶಕ್ಕೆ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ 32 ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ಇನ್ನೂ 68 ಘಟಕಗಳು ಯತ್ಪಾದನೆಗೆ ತಾತ್ವಿಕ ಅನುಮೋದನೆ ಪಡೆದಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.