ADVERTISEMENT

ಶರಣರೊಂದಿಗೆ ಹೆಜ್ಜೆ ಹಾಕಿದ ಕಲಾವಿದರು

ಮಧ್ಯ ಕರ್ನಾಟಕದ ‘ಶರಣ ಸಂಸ್ಕೃತಿ ಉತ್ಸವ’ಕ್ಕೆ ನಿರ್ಮಾಪಕ ರಾಕ್‌ಲೈನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 18:16 IST
Last Updated 13 ಅಕ್ಟೋಬರ್ 2018, 18:16 IST
ಚಿತ್ರದುರ್ಗದಲ್ಲಿ ಶನಿವಾರ ಪ್ರಾರಂಭವಾದ ‘ಶರಣ ಸಂಸ್ಕೃತಿ ಉತ್ಸವ 2018’ ರ ಸೌಹಾರ್ದ ನಡಿಗೆಯಲ್ಲಿ ಶರಣರೊಂದಿಗೆ ಕಲಾವಿದರು ಹೆಜ್ಜೆ ಹಾಕಿದರು.
ಚಿತ್ರದುರ್ಗದಲ್ಲಿ ಶನಿವಾರ ಪ್ರಾರಂಭವಾದ ‘ಶರಣ ಸಂಸ್ಕೃತಿ ಉತ್ಸವ 2018’ ರ ಸೌಹಾರ್ದ ನಡಿಗೆಯಲ್ಲಿ ಶರಣರೊಂದಿಗೆ ಕಲಾವಿದರು ಹೆಜ್ಜೆ ಹಾಕಿದರು.   

ಚಿತ್ರದುರ್ಗ: ಮಧ್ಯ ಕರ್ನಾಟಕದ ‘ಶರಣ ಸಂಸ್ಕೃತಿ ಉತ್ಸವ 2018’ ಶನಿವಾರ ‘ಸೌಹಾರ್ದ ನಡಿಗೆ ಶರಣ ಸಂಸ್ಕೃತಿಯ ಕಡೆಗೆ’ ಜಾಥಾದೊಂದಿಗೆ ಪ್ರಾರಂಭವಾಗಿದ್ದು, ಅ.22ರವರೆಗೂ ವೈವಿಧ್ಯಮಯ ಕಾರ್ಯಕ್ರಮಗಳು ಮುರುಘಾಮಠದಲ್ಲಿ ನಡೆಯಲಿವೆ.

ಶಿವಮೂರ್ತಿ ಮುರುಘಾ ಶರಣರ ನೇತೃತ್ವದ ಜಾಥಾಕ್ಕೆ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಾಲನೆ ನೀಡಿದರು. ನಟ ದರ್ಶನ್ ಪಾಲ್ಗೊಂಡಿದ್ದು, ಪ್ರಮುಖ ಆಕರ್ಷಣೆ ಆಗಿತ್ತು. ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ಕಲಾವಿದರಾದ ಶ್ರೀನಿವಾಸ್‌ಮೂರ್ತಿ, ದೊಡ್ಡಣ್ಣ ಹೆಜ್ಜೆ ಹಾಕಿದರು.

ಇಲ್ಲಿನ ಗಾಂಧಿ ವೃತ್ತಕ್ಕೆ ದರ್ಶನ್‌ ಬಂದಾಗ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನಂತರ ಮಾತನಾಡಿದ ಅವರು, ‘ಮನೆಯಲ್ಲಿ ನಾವೆಲ್ಲರೂ ಹಬ್ಬ ಮಾಡುವುದು ಸಾಮಾನ್ಯ. ಆದರೆ, ದಸರಾ ಸಂದರ್ಭದಲ್ಲಿ ನಾಡಿನಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ರೀತಿಯ ಉತ್ಸವವನ್ನು ಜನರು ಒಟ್ಟಾಗಿ ಸೇರಿ ಆಚರಿಸುವ ಸಂಭ್ರಮವನ್ನು ಮರೆಯಲು ಸಾಧ್ಯವಿಲ್ಲ. ಆ ಅನುಭವ ನನಗೀಗ ಇಲ್ಲಿ ಆಯಿತು’ ಎಂದು ಹೇಳಿದರು.

ADVERTISEMENT

ಚಿತ್ರಕಲಾ ಪ್ರದರ್ಶನವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಹೊನಲು ಬೆಳಕಿನ ರಾಜ್ಯಮಟ್ಟದ ಆಹ್ವಾನಿತ ಪುರುಷರ ವಾಲಿಬಾಲ್ ‘ಜಮುರಾ ಕಪ್‌-2018’ ಕ್ರೀಡಾಕೂಟಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.