ADVERTISEMENT

ಶರಾವತಿ ಯೋಜನೆ: ಬಿಎಸ್‌ವೈ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:34 IST
Last Updated 23 ಜೂನ್ 2019, 19:34 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಶರಾವತಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುವ ಯೋಜನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತುರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ವಿರೋಧಿಸಿದ್ದಾರೆ.

ಲಿಂಗನಮಕ್ಕಿ ಯೋಜನೆ ಜಲ ವಿದ್ಯುತ್ ತಯಾರಿಕೆಗೆಂದೇ ನಿರ್ಮಾಣಗೊಂಡ ಯೋಜನೆ. ಪರಿಸರ ಹಾಳು ಮಾಡುವ ಈ ಯೋಜನೆ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು. ಪರ್ಯಾಯ ಮಾರ್ಗಗಳನ್ನು ಆಲೋಚಿಸಬೇಕು. ಉದ್ದೇಶಿತ ಯೋಜನೆಗೆ ವಿರೋಧವಿದೆ ಎಂದು ಯಡಿಯೂರಪ್ಪ ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅವೈಜ್ಞಾನಿಕ ಯೋಜನೆ:ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾವಿತ ಯೋಜನೆ ಅವೈಜ್ಞಾನಿಕ. ವಿಶ್ವದಲ್ಲೇ ಅಪರೂಪದ ಜೀವವೈವಿಧ್ಯ ತಾಣ ಎನಿಸಿದ ಪಶ್ಚಿಮಘಟ್ಟ ಪರಿಸರಕ್ಕೆ ಈ ಯೋಜನೆ ಮಾರಕ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ADVERTISEMENT

ಸಾವಿರಾರು ಕೋಟಿ ವೆಚ್ಚದ ಇಂತಹ ಯೋಜನೆಯ ಬದಲಿಗೆ ಮಳೆ ನೀರು ಕೊಯ್ಲಿನಂತಹ ಪರ್ಯಾಯ ವಿಧಾನದ ಮೂಲಕ ರಾಜಧಾನಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

‘ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಪರಿಸರ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಇಂದಿನ ಅಗತ್ಯ. ಪ್ರಕೃತಿಗೆ ವಿರುದ್ಧವಾದ
ಯಾವ ಯೋಜನೆಯೂ ಸುಸ್ಥಿರವಾಗಲಾರದು. 400 ಕಿಲೋಮೀಟರ್ ದೂರದಿಂದ ಒಂದೂವರೆ ಸಾವಿರ ಅಡಿ ಎತ್ತರದ ಬೆಂಗಳೂರಿಗೆ ನೀರು ತರುವ ಪ್ರಸ್ತಾವ ಕೈಬಿಟ್ಟು, ರಾಜಧಾನಿಯ ಅನಿಯಂತ್ರಿತ ಬೆಳವಣಿಗೆ ತಡೆದು, ಸುಸ್ಥಿರ ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಸೂಕ್ತ ಎಂದುಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಜಾರಿಯಾಗಿರುವ ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ಸಾವೇಹಕ್ಕಲು, ವಾರಾಹಿ, ಗೇರುಸೊಪ್ಪಾ, ಗಾಜನೂರು, ಭದ್ರಾ, ಮಾಣಿ, ನಾಗಝರಿ, ಕಾಳಿ ಯೋಜನೆಗಳಿಂದ ಈ ಭಾಗದಜನರು ಅಪಾರ ಕಷ್ಟ ನಷ್ಟ ಅನುಭವಿಸಿದ್ದಾರೆ. ಮತ್ತೊಂದು ದುಬಾರಿ ಯೋಜನೆಯ ದುಸ್ಸಾಹಸ ಮಾಡುವ ಬದಲು, ಮಳೆ ನೀರು ಕೊಯ್ಲಿನಂಥ ಸುಸ್ಥಿರ ವಿಧಾನದತ್ತ ಗಮನ ಹರಿಸುವುದು ಸೂಕ್ತ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.