ನವದೆಹಲಿ: ಶರಾವತಿ ಕಣಿವೆಯ ಸಿಂಹದ ಬಾಲದ ಸಿಂಗಳೀಕ ಅಭಯಾರಣ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ. 28 ಷರತ್ತುಗಳನ್ನು ಪಾಲಿಸಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದೆ.
ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬಳಸುವ ₹9,000 ಸಾವಿರ ಕೋಟಿ ಮೊತ್ತದ ಯೋಜನೆ ಇದು. ಒಟ್ಟು 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ. ಡಿಪಿಆರ್‌ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರವು 2024ರ ಆಗಸ್ಟ್‌ನಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಗೆ 352.77 ಎಕರೆ ಜಮೀನು ಅಗತ್ಯವಿದೆ. ಅದರಲ್ಲಿ 133.81 ಎಕರೆ ಅರಣ್ಯ ಭೂಮಿಯಾಗಿದೆ.
ಕೇಂದ್ರ ಅರಣ್ಯ ಸಚಿವ ಭೂಪೆಂದರ್ ಯಾದವ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ, ಈ ಯೋಜನೆಯಿಂದಾಗಿ ಸಿಂಹದ ಬಾಲದ ಸಿಂಗಳೀಕ ಸೇರಿದಂತೆ ವಿವಿಧ ವನ್ಯಜೀವಿಗಳ ಮೇಲೆ ಪರಾಮರ್ಶೆ ನಡೆಸಲಾಯಿತು. ಈ ಅಭಯಾರಣ್ಯದಲ್ಲಿ 700ಕ್ಕೂ ಹೆಚ್ಚು ಸಿಂಹದ ಬಾಲದ ಸಿಂಗಳೀಕಗಳಿವೆ. ಇಷ್ಟೊಂದು ಸಿಂಗಳೀಕಗಳು ಬೇರೆ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಇಲ್ಲ ಎಂಬ ವರದಿಗಳನ್ನು ಮಂಡಳಿ ಗಮನಿಸಿತು. ಈ ಯೋಜನೆಗೆ ಒಪ್ಪಿಗೆ ನೀಡುವುದಕ್ಕೆ ಸಮಿತಿಯ ಸದಸ್ಯರಾದ ಡಾ. ಎಚ್.ಎಸ್.ಸಿಂಗ್ ಹಾಗೂ ಡಾ. ಆರ್.ಸುಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಯೋಜನೆಗೆ ಅರಣ್ಯ ಅನುಮೋದನೆ ಪಡೆದ ನಂತರ ಸ್ಥಾಯಿ ಸಮಿತಿಯ ಪರಿಗಣನೆಗೆ ಪ್ರಸ್ತಾವನೆಯನ್ನು ಮತ್ತೊಮ್ಮೆ ಮಂಡಿಸಬಹುದು ಎಂದು ಸಚಿವ ಯಾದವ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.