ADVERTISEMENT

ಶಿವಲಿಂಗದ ಮೇಲೆ ಚೇಳು: ತರೂರ್‌ ಹೇಳಿಕೆಗೆ ಕುಟುಕಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:25 IST
Last Updated 28 ಅಕ್ಟೋಬರ್ 2018, 20:25 IST
   

ಬೆಂಗಳೂರು/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರ್‌ಎಸ್‌ಎಸ್‌ ಮುಖಂಡರೊಬ್ಬರು ‘ಶಿವಲಿಂಗದ ಮೇಲೆ ಕುಳಿತಿರುವ ಚೇಳಿಗೆ’ ಹೋಲಿಸಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರು ವಿವಾದ ಸೃಷ್ಟಿಸಿದ್ದಾರೆ.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತರೂರ್‌, ಈ ಹೋಲಿಕೆ ಅತ್ಯಂತ ಗಮನಾರ್ಹವಾದುದು ಎಂದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಮತ್ತು ಇತರರು ತರೂರ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ತರೂರ್‌, ‘ಇದು ನಾನು ಮಾಡಿದ ಹೋಲಿಕೆ ಅಲ್ಲ, ಆರು ವರ್ಷಗಳಿಂದ ಇದು ಎಲ್ಲೆಡೆ ಹರಿದಾಡುತ್ತಿದೆ’ ಎಂದಿದ್ದಾರೆ.

ADVERTISEMENT

ಶಿವಭಕ್ತ ಎಂದು ತಮ್ಮನ್ನು ಬಿಂಬಿಸಿಕೊಳ್ಳುವ ರಾಹುಲ್‌ ಅವರು ತರೂರ್‌ ಅವರ ಹೇಳಿಕೆಯನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಹುಲ್‌ ಕ್ಷಮೆ ಕೇಳಬೇಕು ಎಂದು ರವಿಶಂಕರ್ ಪ್ರಸಾದ್‌ ಆಗ್ರಹಿಸಿದ್ದಾರೆ.

‘ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಪರಂಪರೆಯನ್ನು ಪ್ರತಿನಿಧಿಸುವುದಾಗಿ ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಆದರೆ, ಈಗ ರಾಹುಲ್‌ ಅವರ ಅಧ್ಯಕ್ಷತೆಯಲ್ಲಿ ಆ ಪಕ್ಷವು ಸಾರ್ವಜನಿಕ ಸಂವಾದದ ಅತ್ಯಂತ ಕೆಟ್ಟ ಮಾದರಿಯನ್ನು ಪ್ರದರ್ಶಿಸುತ್ತಿದೆ. ಸಂವಾದವನ್ನು ಅವಾಚ್ಯ ನಿಂದನೆಯ ಮಟ್ಟಕ್ಕೆ ಇಳಿಸಿದೆ’ ಎಂದು ಅವರು ಹರಿಹಾಯ್ದಿದ್ದಾರೆ.

ಪ್ರದಾನಿ ಮೋದಿ ಅವರ ಬಗ್ಗೆ ಹೇಳಿಕೆ ನೀಡಿ ತರೂರ್‌ ಅವರು ವಿವಾದ ಸೃಷ್ಟಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಬಾರಿ. ‘ವಿಲಕ್ಷಣವಾಗಿ ಕಾಣುವ ನಾಗಾ ದಿರಿಸು ತೊಡುವ ಮೋದಿ ಅವರು ಮುಸ್ಲಿಮರು ಧರಿಸುವ ಟೋಪಿ ಹಾಕಿಕೊಳ್ಳಲು ಒಪ್ಪುವುದಿಲ್ಲ’ ಎಂದು ಆಗಸ್ಟ್‌ನಲ್ಲಿ ತರೂರ್‌ ಹೇಳಿದ್ದರು. ಇದು ಈಶಾನ್ಯ ಭಾರತದ ಜನರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮುಖಂಡರು ಬಣ್ಣಿಸಿದ್ದರು.

‘ಅಯೋಧ್ಯೆಯಲ್ಲಿ ಬೇರೊಬ್ಬರ ಪ್ರಾರ್ಥನಾ ಸ್ಥಳವನ್ನು ನಾಶ ಮಾಡಿ ಅಲ್ಲಿ ದೇವಾಲಯ ಕಟ್ಟುವುದನ್ನು ಒಳ್ಳೆಯ ಹಿಂದೂ ಒಪ್ಪುವುದಿಲ್ಲ’ ಎಂದು ಕೆಲವೇ ದಿನಗಳ ಹಿಂದೆ ತರೂರ್‌ ಹೇಳಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ತರೂರ್‌ ಹೇಳಿದ್ದೇನು?

ಮೋದಿ ಅವರು ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ ಎಂದು ಆರ್‌ಎಸ್‌ಎಸ್‌ ಮುಖಂಡರೊಬ್ಬರು ಹೇಳಿದ್ದರು. ಅದನ್ನು ಕೈಯಲ್ಲಿ ತೆಗೆಯಲು ಹೋದರೆ ಅದು ಕುಟುಕುತ್ತದೆ. ಹಾಗಂತ ಚಪ್ಪಲಿಯಲ್ಲಿ ಹೊಡೆದು ಕೆಳಗೆ ಹಾಕುವಂತೆಯೂ ಇಲ್ಲ. ಹಾಗೆ ಮಾಡಿದರೆ ಶಿವಲಿಂಗಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದು ಅವರು ವಿವರಿಸಿದ್ದರು. ಹಿಂದುತ್ವ ಚಳವಳಿ ಮತ್ತು ಮೋದಿತ್ವ ಅಭಿವ್ಯಕ್ತಿಯ ನಡುವಣ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಇದು ಬಹಳ ಆಸಕ್ತಿದಾಯಕ ಸುಳಿವು ಕೊಡುತ್ತದೆ ಎಂದು ತರೂರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.