ಶಶಿ ತರೂರ್
ಪಿಟಿಐ ಚಿತ್ರ
ನವದೆಹಲಿ: ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕುರಿತ ವಿಶೇಷ ಚರ್ಚೆಯಲ್ಲಿ ಪಕ್ಷದ ಪರವಾಗಿ ಮಾತನಾಡಬೇಕೆಂಬ ಕಾಂಗ್ರೆಸ್ ಪಕ್ಷದ ಸೂಚನೆಯನ್ನು ಪಾಲಿಸಲು ತಿರುವನಂತಪುರ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ. ಇದರಿಂದಾಗಿ, ಕಾಂಗ್ರೆಸ್ ಹಾಗೂ ತರೂರ್ ನಡುವಿನ ಅಂತರ ಇನ್ನಷ್ಟು ಹೆಚ್ಚಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯ ಮೇರೆಗೆ ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ತರೂರ್ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡರು. ಇದಕ್ಕೆ ತರೂರ್ ಒಪ್ಪಲಿಲ್ಲ. ಬಂದರು ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡುತ್ತೇನೆ ಎಂಬುದಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಸಂಸತ್ ಭವನದಲ್ಲಿ ತರೂರ್ ಅವರಲ್ಲಿ ಪತ್ರಕರ್ತರು, ‘16 ಗಂಟೆಗಳ ವಿಶೇಷ ಚರ್ಚೆಯಲ್ಲಿ ಮಾತನಾಡುತ್ತೀರಾ’ ಎಂದು ಪ್ರಶ್ನಿಸಿದರು. ‘ನನ್ನದು ಮೌನ ವ್ರತ’ ಎಂದು ಅವರು ಪ್ರತಿಕ್ರಿಯಿಸಿದರು.
ಸಿಂಧೂರ ಕಾರ್ಯಾಚರಣೆಯ ಬಳಿಕ ವಿವಿಧ ದೇಶಗಳಿಗೆ ಭೇಟಿ ನೀಡಿದ್ದ ನಿಯೋಗದ ನೇತೃತ್ವವನ್ನು ತರೂರ್ ವಹಿಸಿದ್ದರು. ಚರ್ಚೆಯ ಸಮಯದಲ್ಲಿ ಅವರು ಮಾತನಾಡುತ್ತಾರೆ ಎಂಬ ಊಹಾಪೋಹವಿತ್ತು. ಚರ್ಚೆ ಆರಂಭವಾದಾಗ ಅವರು ಲೋಕಸಭೆಯಲ್ಲಿದ್ದರು ಹಾಗೂ ಗೌರವ್ ಗೊಗೊಯ್ ಭಾಷಣದ ವೇಳೆ ಹಾಜರಿದ್ದರು.
ಚರ್ಚೆಯ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಬೇಕು ಹಾಗೂ ಸದನದ ಕಾರ್ಯಕಲಾಪದಲ್ಲಿ ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಪಕ್ಷವು ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿ ಮಾಡಿದೆ. ಆಪರೇಷನ್ ಸಿಂಧೂರ ವಿಷಯದಲ್ಲಿ ತರೂರ್ ನಿಲುವು ಪಕ್ಷದ ನಿಲುವಿಗಿಂತ ಭಿನ್ನವಾಗಿದೆ. ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆ ಬಳಿಕದ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ಪಕ್ಷವು ಅನೇಕ ಪ್ರಶ್ನೆಗಳನ್ನು ಕೇಳಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಸಂಸದ ಸಾರ್ವಜನಿಕವಾಗಿ ಹೊಗಳಿದ್ದಾರೆ.
ತರೂರ್ ಲಕ್ಷ್ಮಣರೇಖೆ ದಾಟಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಅವರು ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದರು. ಭಾರತವು 2016ರ ಮೊದಲು ಸರ್ಜಿಕಲ್ ಸ್ಟ್ರೈಕ್ ನಡೆಸಿರಲಿಲ್ಲ ಎಂದೂ ಅವರು ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.