ADVERTISEMENT

ಪೊಲೀಸ್‌ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು

ಶಶಿಕಲಾಗೆ ಜೈಲಿನಲ್ಲಿ ಸೌಲಭ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 24 ಮೇ 2023, 0:29 IST
Last Updated 24 ಮೇ 2023, 0:29 IST
   

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ. ಜಯಲಲಿತಾರ ಆಪ್ತ ಸ್ನೇಹಿತೆ ವಿ.ಕೆ. ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್, ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ ಡಾ.ಆರ್. ಅನಿತಾ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್‌  ಗಜರಾಜ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಕುರಿತಂತೆ ಪೊಲೀಸ್ ಅಧಿಕಾರಿಗಳಾದ ಗಜರಾಜ ಮಾಕನೂರ್, ಆರ್.ಅನಿತಾ ಮತ್ತು ಕೃಷ್ಣಕುಮಾರ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಈ ಪ್ರಕರಣದಲ್ಲಿ ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್.ಎನ್. ಸತ್ಯನಾರಾಯಣ ಪ್ರಮುಖ ಆರೋಪಿಯಾಗಿದ್ದು, ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲಾಗಿದೆ. ಆದರೆ, ಅನಿತಾ ಮತ್ತು ಇತರರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅನಿತಾ ತಮ್ಮ ಮೇಲಧಿಕಾರಿಯಾಗಿದ್ದ ಮುಖ್ಯ ಜೈಲು ಅಧೀಕ್ಷಕ ಕೃಷ್ಣಕುಮಾರ ಸೂಚನೆಯಂತೆ ನಡೆದುಕೊಂಡಿದ್ದಾರೆ. ಆದರೆ, ಅನಿತಾ ವಿರುದ್ಧದ ವಿಚಾರಣೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿರುವುದು ಗಮನಾರ್ಹ. ಇದರ ಆಧಾರದಲ್ಲಿ ಅವರ ವಿರುದ್ಧದ ವಿಚಾರಣೆಯನ್ನು ಸರ್ಕಾರ ಕೈಬಿಟ್ಟಿದೆ. ಆದರೂ, ಇದೇ ಆರೋಪಕ್ಕೆ ಸಂಬಂಧಿಸಿದಂತೆ ಅನಿತಾ ವಿರುದ್ಧ ಕ್ರಮ ಜರುಗಿಸಲು ಮತ್ತೊಮ್ಮೆ ಪೂರ್ವಾನುಮತಿ ನೀಡಲಾಗಿದೆ. ಇದು ಕಾನೂನಿನ ದುರ್ಬಳಕೆಯಾಗಿದೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಇದೇ ವೇಳೆ ನ್ಯಾಯಪೀಠ, ‘ಪ್ರಕರಣದ ಮೊದಲನೇ ಆರೋಪಿಯಾದ ಕೃಷ್ಣಕುಮಾರ್ ವಿರುದ್ಧ ವಿವೇಚನೆ ಬಳಸಿ ಪೂರ್ವಾನುಮತಿ ನೀಡುವ ಕುರಿತಂತೆ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಲು ಸಕ್ಷಮ ಪ್ರಾಧಿಕಾರ ಮುಕ್ತವಾಗಿದೆ’ ಎಂದು ತಿಳಿಸಿದೆ.

ಪ್ರಕರಣವೇನು?: ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 2017ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಶಶಿಕಲಾ ಮತ್ತು ಅವರ ಸಂಬಂಧಿ ಇಳವರಸಿಗೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ₹ 2 ಕೋಟಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಆರೋಪ ಕೇಳಿಬಂದಿತ್ತು.

ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ನಂತರ ಸರ್ಕಾರ ತನಿಖೆಯನ್ನು ಎಸಿಬಿಗೆ ವರ್ಗಾಯಿಸಿತ್ತು. ತನಿಖೆ ಪೂರ್ಣಗೊಳಿಸಿದ್ದ ಎಸಿಬಿಗೆ, ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.