ADVERTISEMENT

ಕಚೇರಿಗಳ ಸ್ಥಳಾಂತರ: ಕಾಲಮಿತಿಯಲ್ಲಿ ನಡೆಯಲಿ–ಸರ್ಕಾರಕ್ಕೆ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 14:07 IST
Last Updated 20 ಡಿಸೆಂಬರ್ 2018, 14:07 IST
ಪ್ರಮುಖ 9 ಕಚೇರಿಗಳ ಸ್ಥಳಾಂತರ ನಿರ್ಧಾರ ಸ್ವಾಗತಿಸಿ ಕನ್ನಡ ಸಂಘಟನೆಗಳ ಸದಸ್ಯರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮ ಆಚರಿಸಿದರು
ಪ್ರಮುಖ 9 ಕಚೇರಿಗಳ ಸ್ಥಳಾಂತರ ನಿರ್ಧಾರ ಸ್ವಾಗತಿಸಿ ಕನ್ನಡ ಸಂಘಟನೆಗಳ ಸದಸ್ಯರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮ ಆಚರಿಸಿದರು   

ಬೆಳಗಾವಿ: ಪ್ರಮುಖ 9 ಕಚೇರಿಗಳನ್ನು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರವನ್ನು ಉತ್ತರ ಕರ್ನಾಟಕ ಮಠಾಧೀಶರ ಒಕ್ಕೂಟದ ಮಠಾಧೀಶರು ಮತ್ತು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡರು ಅಭಿನಂದಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಸಚಿವ ಸಂಪುಟದ ನಿರ್ಣಯವನ್ನು ಸ್ವಾಗತಿಸುತ್ತೇವೆ. ಎಷ್ಟು ದಿನಗಳಲ್ಲಿ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎನ್ನುವುದನ್ನು ಈ ಅಧಿವೇಶನದಲ್ಲಿಯೇ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

‘ಗಡಿ ಅಭಿವೃದ್ಧಿ ಪ್ರಾಧಿಕಾರದಂಥ ಕಚೇರಿಗಳನ್ನು ಕೂಡ ಇಲ್ಲಿಗೆ ಸ್ಥಳಾಂತರಿಸಬೇಕು. ಮತ್ತೆ ಪ್ರತ್ಯೇಕತೆಯ ಕೂಗು ಕೇಳಿ ಬಾರದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ‘ಕಚೇರಿಗಳ ಸ್ಥಳಾಂತರದ ನಿರ್ಣಯವನ್ನು ಸ್ವಾಗತಾರ್ಹ. ಇದು ಹೋರಾಟಕ್ಕೆ ಸಂದ ಮೊದಲ ಜಯ. ಆದರೆ, ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಸುವರ್ಣ ವಿಧಾನಸೌಧವನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸುವವರೆಗೆ ಹೋರಾಟ ಮುಂದುವರಿಯುತ್ತದೆ’ ಎಂದು ಹೇಳಿದರು.

ಮುಖಂಡ ಆರ್.ಎಸ್. ದರ್ಗೆ ಮಾತನಾಡಿ, ‘ಸುವರ್ಣ ವಿಧಾನಸೌಧದ ಒಳಗೆ ಕಾರ್ಯನಿರ್ವಹಿಸುವ ಕಾರ್ಯದರ್ಶಿಗಳ ಮಟ್ಟದ ಕಚೇರಿಗಳು ಸ್ಥಳಾಂತರವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು’ ಎಂದು ಆಗ್ರಹಿಸಿದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಮುಖಂಡರಾದ ಪ್ರವೀಣ ಪಾಟೀಲ, ಮಂಜುನಾಥ ವಸ್ತ್ರದ, ವಿ.ಜಿ. ನಿರಲಗಿಮಠ, ಬಸವರಾಜ ಮಠಪತಿ ಇದ್ದರು.

ಕನ್ನಡ ಸಂಘಟನೆ ಯುವಕರಿಂದ ಸಂಭ್ರಮ

‘ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಮಾಡುವ ನಿರ್ಧಾರವು ಗಡಿ ಭಾಗದ ಕನ್ನಡ ಸಂಘಟನೆಗಳು 6 ವರ್ಷಗಳಿಂದ ನಡೆಸಿದ ಸತತ ಹೋರಾಟಕ್ಕೆ ಸಂದ ಜಯವಾಗಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಸರ್ಕಾರದ ನಿರ್ಧಾರ ಸ್ವಾಗತಿಸಿ ನೃಪತುಂಗ ಯುವಕ ಮಂಡಳದ ಪದಾಧಿಕಾರಿಗಳು ರಾಣಿ ಚನ್ನಮ್ಮ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

‘ಇನ್ನೂ ಅನೇಕ ಕಚೇರಿಗಳನ್ನು ಸ್ಥಳಾಂತರಿಸುವ ಅಗತ್ಯವಿದೆ. ಈ ಕುರಿತು ಮುಂಬರುವ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಳಗಾವಿಗೆ ಬಂದು 10 ದಿನಗಳಾದರೂ ಕನ್ನಡ ಸಂಘಟನೆಗಳ ಮುಖಂಡರ ಜೊತೆಗೆ ಚರ್ಚಿಸಲಿಲ್ಲ. ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಿಲ್ಲ’ ಎಂದು ಮುಖಂಡ ಸಾಗರ್ ಬೋರಗಲ್ಲ ಹೇಳಿದರು.

ಸಾರ್ವಜನಿಕರಿಗೆ ಸಿಹಿ ಹಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.