ಬೆಂಗಳೂರು: ವೇದವಾಙ್ಮಯ, ಸರ್ವಮೂಲಗ್ರಂಥಗಳು, ವ್ಯಾಸಸಾಹಿತ್ಯವನ್ನೇ ಆಧಾರವಾಗಿರಿಸಿಕೊಂಡ ಮಾಧ್ವಪರಂಪರೆಯ ಮಠಗಳಲ್ಲಿ ಹೊಸತನದ ತುಡಿತ, ಬಂಡುಕೋರತನ, ಪ್ರಶ್ನಿಸುವ ಮನಃಸ್ಥಿತಿಗಳೂ ಸಾಧ್ಯ ಎಂದು ತೋರಿಸಿಕೊಟ್ಟವರು ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥರು.
‘ಅವರ‍್ಯಾರು ಹೇಳ್ಲೀಕೆ?’ ಎಂದು ಉಡುಪಿ ಅಷ್ಟಮಠಗಳ ಪೈಕಿ ಹಿರಿಯರಾದ ಪೇಜಾವರ ಮಠದ ವಿಶ್ವೇಶ ತೀರ್ಥರನ್ನೇ ಪ್ರಶ್ನಿಸುವ ಎದೆಗಾರಿಕೆ ಲಕ್ಷ್ಮೀವರ ತೀರ್ಥರಿಗೆ ಇತ್ತು. ಹೀಗೆ ಪ್ರಶ್ನಿಸುತ್ತಲೇ ಬಾರದ ಲೋಕಕ್ಕೆ ಪಯಣ ಹೊರಟ ಅವರು ಬಿಟ್ಟುಹೋದ ಪ್ರಶ್ನೆಗಳು ಹಲವು. ಇವು ಕೇವಲ ಮಾಧ್ವ ಸಮುದಾಯವನ್ನು ಮಾತ್ರವಲ್ಲ, ಎಲ್ಲ ಆಸ್ತಿಕರನ್ನೂ ಬಹುಕಾಲ ಕಾಡಲಿವೆ.
ಲಕ್ಷ್ಮೀವರ ತೀರ್ಥರು ಎತ್ತುತ್ತಿದ್ದ ಪ್ರಶ್ನೆಗಳನ್ನು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದೂ ಸೇರಿದಂತೆ ಅವರು ನಡೆಸಿದ್ದ ಹೊಸ ಸಾಹಸಗಳನ್ನು ಒಂದು ಮಟ್ಟಿಗೆ ಒಪ್ಪಿಕೊಂಡಿದ್ದ ಭಕ್ತರು, ‘ನನ್ನಂತೆ ಅಷ್ಟಮಠಗಳ ಹಲವು ಸ್ವಾಮಿಗಳಿಗೆ ಮಕ್ಕಳಿದ್ದಾರೆ’ ಎಂದು ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈ ಹೇಳಿಕೆಯ ನಂತರ ಲಕ್ಷ್ಮೀವರ ತೀರ್ಥರ ವಿರುದ್ಧ ತಿರುಗಿಬಿದ್ದ ಅಷ್ಟಮಠಗಳ ಇತರ ಯತಿಗಳು ‘ಯತಿಧರ್ಮ ಉಲ್ಲಂಘನೆ’ಯಂಥ ಆರೋಪ ಹೊರಿಸಿ, ‘ಪಟ್ಟದ ದೇವರು ನಿಮ್ಮ ಮಠಕ್ಕೆ ಬರಬೇಕು ಎಂದಿದ್ದರೆ ಶಿಷ್ಯ ಸ್ವೀಕಾರ’ ಮಾಡಿ ಎಂದು ಷರತ್ತು ಹಾಕುವ ಮಟ್ಟಕ್ಕೆ ಹೋಗಿದ್ದರು.
ಪಟ್ಟದ ದೇವರ ವಿಚಾರವನ್ನು ಭಾವುಕವಾಗಿ ತೆಗೆದುಕೊಂಡಿದ್ದ ಲಕ್ಷ್ಮೀವರ ತೀರ್ಥರು ಮಾನಸಿಕವಾಗಿ ಹೈರಾಣಾಗಿದ್ದರು. ಕಾನೂನು ಹೋರಾಟದ ಹಲವು ಆಯಾಮಗಳನ್ನು ಚರ್ಚಿಸಿ ಮುಂದಿನ ನಡೆಗಳನ್ನು ನಿರ್ಧರಿಸಿಕೊಂಡಿದ್ದರು. ಈ ಎಲ್ಲದರ ನಡುವೆಯೇ ಅವರು ಹಠಾತ್ ನಿಧನರಾಗಿರುವುದು ಮತ್ತು ಅವರ ಸಾವಿಗೆ ವಿಷಪ್ರಾಶನದ ಕಾರಣದಂಥ ಗಂಭೀರ ಆರೋಪ ಕೇಳಿ ಬಂದಿರುವುದು ಉಡುಪಿ ಸೇರಿದಂತೆ ನಾಡಿನಾದ್ಯಂತ ಹರಡಿರುವ ಮಾಧ್ವ ಸಮುದಾಯದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
‘ಸನ್ಯಾಸಿಗಳಾದವರು ಹೇಗೆ ಇರಬಾರದಿತ್ತೋ ಹಾಗೆ ಇದ್ದರು ಲಕ್ಷ್ಮೀವರ ತೀರ್ಥರು. ಪೂರ್ವಜನ್ಮದ ಸುಕೃತದಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ' ಎಂದು ಸಮುದಾಯದ ಹಿರಿಯರು ಸಿಟ್ಟಿನ ಮಾತುಗಳನ್ನು ಆಡುತ್ತಾರೆ. ಮತ್ತೊಂದು ತಲೆಮಾರು ಈ ಮಾತನ್ನು ವಿರೋಧಿಸುತ್ತಾ, ‘ಅಷ್ಟಮಠಗಳ ಯತಿಗಳಿಗೆ ಮಕ್ಕಳಿದ್ದಾರೆ ಎನ್ನುವ ಆರೋಪ ವಿರೋಧಿಸುತ್ತೇವೆ. ಅದೊಂದು ಬಿಟ್ಟರೆ ಲಕ್ಷ್ಮೀವರ ತೀರ್ಥರು ಮಾಡಿದ ತಪ್ಪಾದರೂ ಏನು? ಮಠಗಳಲ್ಲಿ ಶಾಸ್ತ್ರಬದ್ಧ ಸಂಪ್ರದಾಯ ಮೀರುವುದು ಬೇರೆ, ಅವೇ ಚೌಕಟ್ಟನ್ನು ಒಪ್ಪಿಕೊಂಡು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುವುದು ಬೇರೆ’ ಎಂದು ಅಭಿಪ್ರಾಯ ಮಂಡಿಸುತ್ತದೆ.
‘ಲಕ್ಷ್ಮೀವರ ತೀರ್ಥರು ಶಿಷ್ಯ ಸ್ವೀಕಾರ ಮಾಡಬೇಕು’ ಎಂದು ಹೇಳುವ ಮೂಲಕ ‘ಪಟ್ಟದ ದೇವರನ್ನು ಪೂಜಿಸಲು ಅವರಿಗೆ ಹಕ್ಕಿಲ್ಲ’ ಎಂದು ಅಷ್ಟಮಠಗಳ ಇತರ ಯತಿಗಳು ಸಾರಿ ಹೇಳಿದ್ದರು. ಅಷ್ಟಮಠಗಳ ಈ ನಿಲುವೂ ಸಹ ಮಾಧ್ವ ಸಮುದಾಯದಲ್ಲಿ ಚರ್ಚೆಯ ವಸ್ತುವಾಗಿದೆ.
‘ಕಾವಿ ಧರಿಸುವುದು ತ್ಯಾಗದ ಪ್ರತೀಕ. ಕಾವಿ ಧರಿಸಿದವರಿಗೆ ಭೋಗಕ್ಕೆ ಅವಕಾಶವಿಲ್ಲ. ಅವರು ರಾಜಕೀಯಕ್ಕೆ ಬರುವುದು ಸಲ್ಲದು. ಸ್ತ್ರೀಯರೊಂದಿಗೆ ಮಾತನಾಡುವುದಷ್ಟೇ ಅಲ್ಲ, ಸ್ತ್ರೀಪ್ರತಿಮೆಯನ್ನೂ ನೋಡಬಾರದು ಎನ್ನುವ ನಿಯಮವಿದೆ. ಕಿರೀಟ ದೊಡ್ಡದಾದಂತೆ ಭಾರವೂ ಹೆಚ್ಚಾಗುತ್ತೆ. ಸಮಾಜವನ್ನು ಮುನ್ನಡೆಸುವ ಸ್ಥಾನದಲ್ಲಿದ್ದವರು ಹೀಗೆ ದುರಂತಮಯ ಅಂತ್ಯವನ್ನು ಕಂಡುದು ವಿಷಾದದ ಸಂಗತಿ’ ಎಂದು ವಿಶ್ಲೇಷಿಸುತ್ತಾರೆ, ಶ್ರೀರಂಗಪಟ್ಟಣದ ಮಾಧ್ವಪಂಡಿತ ವೆಂಕಟೇಶ್ ಆಚಾರ್.
ಆದರೆ ಹೊಸ ತಲೆಮಾರಿನ ಯುವಕರು ಈ ಮಾತುಗಳನ್ನು ಒಪ್ಪುವುದಿಲ್ಲ. ‘ವ್ಯವಸ್ಥೆಯ ಯಥಾಸ್ಥಿತಿವಾದಕ್ಕೆ ಜೋತುಬಿದ್ದಿದ್ದರೆ ಮಧ್ವಾಚಾರ್ಯರು ಅದ್ವೈತಿಗಳೇ ಆಗಿರುತ್ತಿದ್ದರು. ದ್ವೈತಮತ ಸ್ಥಾಪನೆಯೇ ಆಗುತ್ತಿರಲಿಲ್ಲ. ಡ್ರಂ ಬಾರಿಸುವುದು, ಹುಲಿವೇಷದ ಕಲಾವಿದರಿಗೆ ಪ್ರೋತ್ಸಾಹ ಕೊಡುವುದು,ಸಮುದ್ರದಲ್ಲಿ ಈಜುವುದು, ಬೈಕ್ ಸವಾರಿ, ಬೃಹತ್ ವಾಹನಗಳ ಚಾಲನೆಯಿಂದ ಸಂಪ್ರದಾಯ ಉಲ್ಲಂಘನೆ ಆಗುತ್ತದೆ ಎಂದರೆ ಒಪ್ಪುವುದು ಹೇಗೆ? ಉಡುಪಿಯ ಪೇಜಾವರ ಮಠಾಧೀಶರು ರಾಜಕಾರಣ ಮಾಡಿಲ್ಲವೇ? ಅವರನ್ನು ಸಮಾಜ ಒಪ್ಪಿಕೊಂಡಿಲ್ಲವೇ’ ಎಂದು ಪ್ರಶ್ನಿಸುತ್ತಾರೆ, ಬೆಂಗಳೂರಿನ ಯುವಕ ಶ್ರೀನಿವಾಸ.
ಸನ್ಯಾಸಿಗಳು ಬದಲಾಗಬಾರದೆ?
ಲಕ್ಷ್ಮೀವರ ತೀರ್ಥರ ಸಾವು ಇದೀಗ ‘ಯತಿಪ್ರಣಕಲ್ಪ’ ಮತ್ತು ‘ಸದಾಚಾರಸ್ಮೃತಿ’ ಎಂಬ ಮಧ್ವಾಚಾರ್ಯರ ಗ್ರಂಥಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸನ್ಯಾಸಿಗಳು ಹೇಗಿರಬೇಕು ಎಂಬುದನ್ನು ‘ಯತಿಪ್ರಣವಕಲ್ಪ’ ವಿವರಿಸಿದರೆ, ಗೃಹಸ್ಥರ ಬದುಕು ಹೇಗಿರಬೇಕು ಎನ್ನುವುದನ್ನು ‘ಸದಾಚಾರಸ್ಮೃತಿ’ ವಿವರಿಸುತ್ತದೆ. ಶಿರೂರು ಶ್ರೀಗಳ ವಿರುದ್ಧ ಅಷ್ಟಮಠಗಳ ಇತರ ಸ್ವಾಮೀಜಿಗಳು ಪ್ರಸ್ತಾಪಿಸಿದ್ದ ‘ಯತಿಧರ್ಮ’ ಉಲ್ಲಂಘನೆಗೂ ‘ಯತಿಪ್ರಣವಕಲ್ಪ’ದ ಆಧಾರವಿತ್ತು.
‘ಬಹುತೇಕ ಮಾಧ್ವ ಗೃಹಸ್ಥರು ‘ಸದಾಚಾರಸ್ಮೃತಿ’ಯನ್ನು ನೆನಪಿಸಿಕೊಳ್ಳುತ್ತಲೂ ಇಲ್ಲ. ಕಾಲ ಬದಲಾಗಿದೆ. ಶಾಸ್ತ್ರದಂತೆ ಬದುಕಲು ಸಾಧ್ಯವಿಲ್ಲ ಎಂದು ನೆಪ ಹೇಳುತ್ತಾರೆ. ಕಾಲ ಎನ್ನುವುದು ಕೇವಲ ಗೃಹಸ್ಥರಿಗೆ ಮಾತ್ರ ಬದಲಾಗುತ್ತದೆಯೇ? ಸನ್ಯಾಸಿಗಳಿಗೆ ಬದಲಾಗುವುದಿಲ್ಲವೇ? ಶಿರೂರು ಶ್ರೀಗಳ ನಡೆಯನ್ನು ಈ ಹಿನ್ನೆಲೆಯಲ್ಲಿಯೂ ವಿಶ್ಲೇಷಿಸಬೇಕಿದೆ’ ಎನ್ನುವುದು ಶಿರೂರು ಮಠದ ಭಕ್ತರಾದ ರಮೇಶ್ ಬಾಬು ಅವರ ಅಭಿಪ್ರಾಯ.
*ಸ್ವಾಮಿಗಳಿಗೆ ವಿಷಪ್ರಾಶನ ಮಾಡಲಾಗಿತ್ತು ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪಂಚಾಂಗವೂ ಸೇರಿದಂತೆ ನೂರೆಂಟು ಕಾರಣಕ್ಕೆ ಮಠದಿಂದ ಮಠಗಳಿಗೆ ತಾತ್ವಿಕ ಭಿನ್ನಾಭಿಪ್ರಾಯಗಳು ಇರುತ್ತವೆ.
–ಎಂ.ಆರ್. ಗೋಪಾಲಕೃಷ್ಣ, ಬೆಂಗಳೂರು
*ಶಿರೂರು ಸ್ವಾಮಿಗಳ ಮೇಲೆ ನಮಗೆ ವಿಶೇಷ ಭಕ್ತಿ. ಚಿಕ್ಕ ವಯಸ್ಸಿನಲ್ಲೇ ಅವರು ಮೃತಪಟ್ಟಿರುವುದು ದುಃಖ ತಂದಿದೆ. ಅದರಲ್ಲೂ ಅವರ ಸಾವಿನ ಕುರಿತು ಎದ್ದಿರುವ ವಿವಾದ ವಿಷಾದ ಮೂಡಿಸಿದೆ.
– ಬದರಿ ನಾರಾಯಣಾಚಾರ್, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.