
ಶಾಸಕ ಕೆ.ಎಂ. ಶಿವಲಿಂಗೇಗೌಡ
ಬೆಂಗಳೂರು: ಬಿಜೆಪಿ ಶಾಸಕ ಶರಣು ಸಲಗರ ಅವರ ಪತ್ನಿ ಬಗ್ಗೆ ಸದನದಲ್ಲಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ನನ್ನನ್ನು ‘ಕೊಬ್ಬರಿ ಕಳ್ಳ’ ಎಂದು ಕರೆದು ಪ್ರಚೋದಿಸಿದ ಕಾರಣ ಕೋಪದಿಂದ ಈ ರೀತಿ ಪ್ರತಿಕ್ರಿಯೆ ನೀಡಬೇಕಾಯಿತು’ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನನಗೆ ಯಾವ ಸದಸ್ಯರ ಬಗ್ಗೆಯೂ ವೈಯಕ್ತಿಕವಾಗಿಯಾಗಲಿ, ಅವರ ಕುಟುಂಬದವರ ಬಗ್ಗೆಯಾಗಲಿ ಮಾತನಾಡುವ ಉದ್ದೇಶ ಇರಲಿಲ್ಲ’ ಎಂದರು.
‘ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮುಖ್ಯಮಂತ್ರಿ ಮಂಡಿಸಿದ್ದ ನಿರ್ಣಯದ ಪರ ವಿಧಾನಸಭೆಯಲ್ಲಿ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ನನಗೆ ಅಡ್ಡಿಪಡಿಸಿದರು. ತಮ್ಮ ಪಾಡಿಗೆ ಪ್ರತಿಭಟನೆ ಮಾಡಿಕೊಂಡಿದ್ದರೆ ನಾನು ಪ್ರಚೋದನೆಗೆ ಒಳಗಾಗುತ್ತಿರಲಿಲ್ಲ. ನನ್ನ ಬಗ್ಗೆ ವೈಯಕ್ತಿಕ ನಿಂದನೆ, ಟೀಕೆಗಳನ್ನು ಮಾಡಿದ್ದರಿಂದ ಆಕ್ರೋಶ ವ್ಯಕ್ತಪಡಿಸಬೇಕಾಯಿತು’ ಎಂದರು.
‘ಸಲಗರ ಮತ್ತು ವೇದವ್ಯಾಸ ಕಾಮತ್ ಬಗ್ಗೆ ಮಾತ್ರ ನಾನು ಮಾತನಾಡಿದ್ದೇನೆ. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ ಶರಣು ಸಲಗರ ಶಾಸಕ ಆಗಿದ್ದಾರೆಂದು ನಮ್ಮ ಕಡೆಯ ಯಾರೊ ಹೇಳಿದ್ದರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣು ಮಕ್ಕಳ ಬಗ್ಗೆ ಯಾವತ್ತೂ ನಾನು ಮಾತನಾಡುವವನಲ್ಲ’ ಎಂದೂ ಹೇಳಿದರು.
‘ಅಧಿವೇಶನದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುವುದು ಬಿಟ್ಟು ಥೈತಕ ಕುಣಿಯುತ್ತಿದ್ದರು. ಸಭಾಧ್ಯಕ್ಷರ ಪೀಠದ ಮುಂದೆ ಮಾತನಾಡಿದ ಆಡಿಯೊ ಮಾಧ್ಯಮಗಳ ಮೂಲಕ ಹೋಗಲ್ಲ ಎಂದು ಅವರು ಬಾಯಿಗೆ ಬಂದಂತೆ ಕೂಗಿದರು. ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕಿತ್ತೊ ಕೊಟ್ಟೆ. ಬಿಜೆಪಿಯವರಿಗೆ ನನ್ನ ವೈಯಕ್ತಿಕ ಬದುಕಿನ ವಿಚಾರ ಯಾಕೇ ಬೇಕು? ಕಳ್ಳ ಎಂದು ಪ್ರಚೋದಿಸಿದವರನ್ನು ಬುದ್ಧಿ, ಗುರುಗಳೇ ಎಂದು ಹೇಳಬೇಕಿತ್ತೇ’ ಎಂದೂ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.