ADVERTISEMENT

ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರು: ಶಿವರಾಂ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 19:31 IST
Last Updated 4 ಸೆಪ್ಟೆಂಬರ್ 2021, 19:31 IST
ಶಿವರಾಮ್‌ ಹೆಬ್ಬಾರ್‌
ಶಿವರಾಮ್‌ ಹೆಬ್ಬಾರ್‌   

ಬೆಂಗಳೂರು:‘ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದವಿಶ್ವ ಪತ್ರಿಕಾ ವಿತರಕರದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಿಂಗಳಿಗೆ ₹20 ಸಾವಿರ ವೇತನ ಪಡೆಯುವವರನ್ನು ಬಿಟ್ಟು ಉಳಿದವರನ್ನೆಲ್ಲಾ ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಇವರಿಗಾಗಿ ಕೇಂದ್ರ ಸರ್ಕಾರ ‘ಇ–ಶ್ರಮ್‌’ ಪೋರ್ಟಲ್‌ ಜಾರಿಗೊಳಿಸಿದೆ. ಇದಕ್ಕೆ ರಾಜ್ಯದಲ್ಲೂ ಚಾಲನೆ ನೀಡಲಾಗಿದೆ. ಇದರಲ್ಲಿ ನೋಂದಣಿ ಮಾಡಿಕೊಂಡವರಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುತ್ತದೆ’ ಎಂದರು.

ADVERTISEMENT

‘ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರಿದ್ದಾರೆ. ಅವರೆಲ್ಲರಿಗೂ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಇದರ ಅನ್ವಯ ಕಾರ್ಮಿಕರೊಬ್ಬರು ಮೃತಪಟ್ಟರೆ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಸಿಗಲಿದೆ. ಶಾಶ್ವತ ಅಂಗವಿಕಲರಾದರೆ ₹1.5 ಲಕ್ಷ ಹಾಗೂ ಅಂಗವಿಕಲರಾದರೆ ₹ 1 ಲಕ್ಷ ನೆರವು ನೀಡಲಾಗುತ್ತದೆ’ ಎಂದು ಹೇಳಿದರು.

‘ಪತ್ರಿಕಾ ವಿತರಕರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿತರಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಈ ಮೊದಲು ₹190 ಕೋಟಿ ನೀಡಲಾಗುತ್ತಿತ್ತು. ಈ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಓದುವವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ’ ಎಂದರು.

‘ಲಾರಿ, ಕ್ಯಾಬ್‌, ಮ್ಯಾಕ್ಸಿಕ್ಯಾಬ್‌ ಚಾಲಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಅವರ ಹೆಣ್ಣು ಮಕ್ಕಳ ಮದುವೆಗೂ ಹಣಕಾಸಿನ ನೆರವು ನೀಡುವ ಚಿಂತನೆ ಇದೆ. ಈ ಸಂಬಂಧ ಅಧಿವೇಶನದಲ್ಲಿ ವಿಶೇಷ ಮಸೂದೆ ಮಂಡಿಸಲಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.