ಕಲಬುರಗಿಯ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗೊಬ್ಬುರ(ಬಿ) ಗ್ರಾಮದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು.
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಪ್ರಧಾನಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಟೀಕಿಸುತ್ತಿದ್ದಾರೆ. ಆದರೆ, ತಮ್ಮ ಸೋಲಿಗೆ ಕಮ್ಯುನಿಸ್ಟ್ ಪಕ್ಷದ ನಾಯಕ ಎಸ್.ಎ. ಡಾಂಗೆ ಹಾಗೂ ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಹೇಳಿಕೊಂಡಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.
ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿ ಶನಿವಾರ ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದ ಅವರು, ‘ನನ್ನ ಸೋಲಿಗೆ ಇಬ್ಬರೂ ನಾಯಕರು ಕಾರಣ ಎಂದು ಅಂಬೇಡ್ಕರ್ ಅವರು ತಮ್ಮ ಸ್ನೇಹಿತ ಕಮಲಕಾಂತ್ ಚಿತಲೆ ಅವರಿಗೆ ಬರೆದ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ’ ಎಂದು ಪತ್ರದ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.
‘ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಅಂಬೇಡ್ಕರ್ ಅವರ ಪ್ರತಿಭೆಯ ಬಗ್ಗೆ ಮಾಹಿತಿ ಇದ್ದುದರಿಂದಲೇ ಅವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಮಾಡಿದ್ದರು. ಕಾನೂನು ಸಚಿವರನ್ನಾಗಿ ಮಾಡಿಕೊಂಡಿದ್ದರು. ಬಿಜೆಪಿಯವರು ಇದನ್ನೆಲ್ಲ ಗಮನಿಸದೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ’ ಎಂದು ಖರ್ಗೆ ಹರಿಹಾಯ್ದರು.
ಕೇಂದ್ರ ನಡೆಸಲು ಉದ್ದೇಶಿಸಿರುವ ಜಾತಿ ಜನಗಣತಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಾತಿಗಣತಿ ನಡೆಸಲು ರಾಹುಲ್ ಗಾಂಧಿ ಮತ್ತು ನಾನು ಆಗ್ರಹಿಸಿದಾಗ ಸಮಾಜವನ್ನು ಒಡೆಯಲು ಇಂತಹ ಬೇಡಿಕೆ ಇಡುತ್ತಿದ್ದಾರೆ ಎಂದಿದ್ದರು. ಈಗ ಮೋದಿಯವರೇ ಜಾತಿ ಗಣತಿಗೆ ಒಪ್ಪಿದ್ದಾರೆ. ನಮ್ಮ ಮನವಿಗೆ ಓಗೊಟ್ಟಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.