ADVERTISEMENT

ತುಮಕೂರು: ಅನುರಣಿಸಿತು ಶಿವಕುಮಾರ ಶ್ರೀ ನೆನಪು

ನಾಡಿನ ವಿವಿಧ ಕಡೆಗಳಿಂದ ಸಿದ್ಧಗಂಗೆಗೆ ಬಂದು ಶ್ರೀಗಳ ಗದ್ದುಗೆಗೆ ನಮಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 21:05 IST
Last Updated 19 ಜನವರಿ 2020, 21:05 IST
ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಸಿದ್ಧಗಂಗಾ ಮಠದಲ್ಲಿ ನಡೆಯಿತು
ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಸಿದ್ಧಗಂಗಾ ಮಠದಲ್ಲಿ ನಡೆಯಿತು   
""

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಭಾನುವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ ಮೊದಲ ಪುಣ್ಯಸ್ಮರಣೆಯು ಸ್ವಾಮೀಜಿ ಅವರು ನಾಡಿಗೆ ನೀಡಿದ ಕೊಡುಗೆ ಮತ್ತು ಅವರ ಸೇವಾ ಕಾರ್ಯಗಳನ್ನು ಮತ್ತೊಮ್ಮೆ
ನೆನಪಿಸಿಕೊಳ್ಳಲು ವೇದಿಕೆ ಒದಗಿಸಿತು.

ವೇದಿಕೆಯಲ್ಲಿ ಗಣ್ಯರಷ್ಟೇ ಅಲ್ಲ ಬಂದಿದ್ದ ಭಕ್ತರೆಲ್ಲರೂ ‘ಸ್ವಾಮೀಜಿ ಭೌತಿಕವಾಗಿ ಇಲ್ಲದಿದ್ದರೂ ಅವರು ಸಮಾಜಕ್ಕೆ ನೀಡಿದ ಕಾಣಿಕೆ ಮತ್ತು ಸೇವೆ ಅವರ ಹೆಸರನ್ನು ನಾಡಿನಲ್ಲಿ ಚಿರಸ್ಥಾಯಿಗೊಳಿಸಿದೆ’ ಎಂದು ಪ್ರಶಂಸಿಸಿದರು. ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಧನ್ಯತೆಯ ಭಾವದಲಿ ಮುಳುಗಿದರು.

ಸೂರ್ಯ ಮೂಡುವ ಮುನ್ನವೇ ಮಠದಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು. ಬೆಳ್ಳಂ ಬೆಳಿಗ್ಗೆ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ಸಣ್ಣ ರಥದಲ್ಲಿ ಸ್ವಾಮೀಜಿ ಅವರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು. ಮಠದ ಆವರಣದ ಅಡಿಗಡಿಗೂ ಶ್ರೀಗಳ ಭಾವಚಿತ್ರಗಳನ್ನು ಹಾಕಲಾಗಿತ್ತು. ಭಕ್ತರು ಈ ಚಿತ್ರಗಳಿಗೂ ನಮಿಸುತ್ತಿದ್ದು ವಿಶೇಷವಾಗಿತ್ತು. ‌ಶಿರಾದ ಹಜ್ರತ್ ಸೈಯದ್ ಮೊಹಮ್ಮದ್ ಷಾಖಾದ್ರಿ ಶಿಕ್ಷಣಾಭಿವೃದ್ಧಿ ಟ್ರಸ್ಟ್‌ನಿಂದ ಭಕ್ತರಿಗೆ ಮಜ್ಜಿಗೆ ಮತ್ತು ನೀರು ವಿತರಿಸಲಾಯಿತು.

ADVERTISEMENT

ವಿವಿಧ ಗಣ್ಯರು, ಮಠಾಧೀಶರು ಗದ್ದುಗೆಯಲ್ಲಿ ಪೂಜೆ ಸಲ್ಲಿಸಿ ವೇದಿಕೆಗೆ ಬಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿ ಭೌತಿಕವಾಗಿ ಮಾತ್ರ ನಮ್ಮೊಂದಿಗೆ ಇಲ್ಲ. ಆದರೆ ಅವರ ಸಾಧನೆಯೇ ನಮ್ಮ ನಡುವೆ ಅವರನ್ನು ಜೀವಂತವಾಗಿಸಿದೆ. ನಾಡಿನ ಎಲ್ಲರ ಹೃದಯಗಳಲ್ಲಿ ಸ್ವಾಮೀಜಿ ಇದ್ದಾರೆ’ ಎಂದು ಸ್ಮರಿಸಿದರು.

‘ದೇಶದಲ್ಲಿ ಮನಸ್ಸು ಮನಸ್ಸುಗಳ ನಡುವೆ ವಿಷ ಬೀಜ ಬಿತ್ತುವ ಸನ್ನಿವೇಶ ಎದುರಾಗಿದೆ. ‌ಜಗತ್ತು ಯುದ್ಧ ಭೀತಿಯಲ್ಲಿ ಇದೆ. ಜಗತ್ತಿನ ಜನರು ನೆಮ್ಮದಿ ಮತ್ತು ಶಾಂತಿಯಿಂದ ಬದುಕಬೇಕಾಗಿದೆ. ಅದಕ್ಕೆ ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯಬೇಕು’ ಎಂದು ಆಶಿಸಿದರು.

‘ಮಠಾಧೀಶರು ಹೇಗೆ ಇರಬೇಕು ಎಂದು ಶಿವಕುಮಾರ ಶ್ರೀಗಳು ಯಾರಿಗೂ ಉಪದೇಶ ನೀಡಲಿಲ್ಲ. ಅವರ ನಡೆ ನುಡಿಯೇ ಮೇರು ವ್ಯಕ್ತಿತ್ವದ ಮಾದರಿಗಳನ್ನು ಸಾರಿತು’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಹೇಳಿದರು.

ಸಚಿವ ಸಿ.ಟಿ.ರವಿ, ‘ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಮತ್ತೆ ಸಾಮಾಜಿಕ ಆಂದೋಲನ ನಡೆಯಬೇಕಿದೆ’ ಎಂದರು.

ಸೋಮಶೇಖರ್‌ಗೆ ಸಚಿವ ಸ್ಥಾನ: ‘ಎಸ್.ಟಿ.ಸೋಮಶೇಖರ್ ಈಗ ಶಾಸಕರಾಗಿದ್ದಾರೆ ಇನ್ನೆರಡು ದಿನಗಳಲ್ಲಿ ಸಚಿವರಾಗಲಿದ್ದಾರೆ’ ಎಂದು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಬಿ.ವೈ.ವಿಜಯೇಂದ್ರ ಅವರು ಭವಿಷ್ಯದ ಪ್ರಭಾವಿ ನಾಯಕರಾಗಲಿದ್ದಾರೆ. ಅವರಲ್ಲಿ ಆ ಶಕ್ತಿ ಇದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಶಿವಕುಮಾರ ಸ್ವಾಮೀಜಿ ಅವರ ಕಾರ್ಯಗಳನ್ನು ಸ್ಮರಿಸಿದರು.

ಅವರೇ ದೊಡ್ಡ ರತ್ನ, ಭಾರತ ರತ್ನವೇಕೆ?
ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ವಿಚಾರ ಪುಣ್ಯ ಸ್ಮರಣೆಯಲ್ಲಿ ಮತ್ತೆ ಕೇಳಿ ಬಂದಿತು. ಸಚಿವ ವಿ.ಸೋಮಣ್ಣ, ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.

ಬಸವರಾಜ ಹೊರಟ್ಟಿ, ‘ಶಿವಕುಮಾರ ಸ್ವಾಮೀಜಿಯೇ ಅತ್ಯಂತ ದೊಡ್ಡ ರತ್ನ, ಇಂತಹ ಅನರ್ಘ್ಯ ರತ್ನಕ್ಕೆ ಭಾರತರತ್ನ ಕೊಡಿ ಎಂದು ಕೇಳಬಾರದು’ ಎಂದು ಪ್ರತಿಪಾದಿಸಿದರು.

‘ಸ್ವಾಮೀಜಿ ಯಾವುದೇ ಫಲಾಪೇಕ್ಷೆ ಇಲ್ಲದೆ, ಪುರಸ್ಕಾರಗಳನ್ನು ನಿರೀಕ್ಷಿಸದೆ ಕೆಲಸ ಮಾಡಿದ್ದಾರೆ. ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ವಿಚಾರ ಮುಖ್ಯವಲ್ಲ’ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಬೆಳ್ಳಿ ಪುತ್ಥಳಿ ಮೆರವಣಿಗೆ
ಪುಣ್ಯ ಸ್ಮರಣೆಯ ‍ಪ್ರಯುಕ್ತ ಉದ್ಯಮಿ ಮುಖೇಶ್ ಗರ್ಗ್ ಅವರು ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಶಿವಕುಮಾರ ಸ್ವಾಮೀಜಿ ಅವರ ಬೆಳ್ಳಿ ಪುತ್ಥಳಿಯನ್ನು ಮಠಕ್ಕೆ ನೀಡಿದರು. ಹಳೇ ಮಠದಲ್ಲಿದ್ದ ಈ ಪುತ್ಥಳಿ ನೋಡಲು ಜನರು ಮುಗಿಬಿದ್ದರು. ಸಂಜೆ ಮಠದ ಆವರಣದಲ್ಲಿ ಪುತ್ಥಳಿ ಮೆರವಣಿಗೆ ನಡೆಯಿತು. ಸ್ವಾಮೀಜಿ ಅವರ ಗದ್ದುಗೆಯಲ್ಲಿ ಇದನ್ನು ಪ್ರತಿಷ್ಠಾಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.