ADVERTISEMENT

ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಸಿದ್ಧಗಂಗಾಶ್ರೀ

ಶುಕ್ರವಾರ ಮಧ್ಯಾಹ್ನ ಕರೆದೊಯ್ಯಲಾಗುವುದು: ಡಾ.ಸಿದ್ಧಲಿಂಗ ಸ್ವಾಮೀಜಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:01 IST
Last Updated 6 ಡಿಸೆಂಬರ್ 2018, 20:01 IST
ಚೆನ್ನೈನ ಡಾ.ಎಲ್.ಎನ್.ಕುಮಾರ ನೇತೃತ್ವದ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ಮಾಡಿ ತೆರಳಿದ ಬಳಿಕ ಡಾ.ಶಿವಕುಮಾರ ಸ್ವಾಮೀಜಿ ಅವರು ಮಠದ ಸಿಬ್ಬಂದಿ ನೆರವಿನೊಂದಿಗೆ ನಡೆದು ಸಾಗಿದರು – ಪ್ರಜಾವಾಣಿ ಚಿತ್ರ
ಚೆನ್ನೈನ ಡಾ.ಎಲ್.ಎನ್.ಕುಮಾರ ನೇತೃತ್ವದ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ಮಾಡಿ ತೆರಳಿದ ಬಳಿಕ ಡಾ.ಶಿವಕುಮಾರ ಸ್ವಾಮೀಜಿ ಅವರು ಮಠದ ಸಿಬ್ಬಂದಿ ನೆರವಿನೊಂದಿಗೆ ನಡೆದು ಸಾಗಿದರು – ಪ್ರಜಾವಾಣಿ ಚಿತ್ರ   

ತುಮಕೂರು: ‘ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯಸುಧಾರಿಸಿದೆ. ಆದಾಗ್ಯೂ ತಜ್ಞ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಪ್ರತಿಷ್ಠಿತ ರೇಲಾ ಇನ್‌ಸ್ಟಿಟ್ಯೂಟ್‌ ಆ್ಯಂಡ್ ಮೆಡಿಕಲ್ ಸೆಂಟರ್‌ಗೆ ಸ್ವಾಮೀಜಿ ಅವರನ್ನುಕರೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ.

ಸಿದ್ಧಗಂಗಾ ಮಠದ ಅಧ್ಯಕ್ಷ ಡಾ.ಸಿದ್ಧಲಿಂಗ ಸ್ವಾಮೀಜಿ ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಉದ್ದೇಶದಿಂದ ಶುಕ್ರವಾರ ಮಧ್ಯಾಹ್ನ ಅಥವಾ ಸಂಜೆ ಚೆನ್ನೈಗೆ ತೆರಳಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಸ್ವಾಮೀಜಿ ಅವರಿಗೆ ಸ್ಟೆಂಟ್ ಅಳವಡಿಸುವ ಅಥವಾ ಇತರೆ ಚಿಕಿತ್ಸೆ ನೀಡುವ ಬಗ್ಗೆ ಅಲ್ಲಿಗೆ ಹೋದ ಮೇಲೆ ತಿಳಿಯಲಿದೆ’ ಎಂದು ತಿಳಿಸಿದರು.

ADVERTISEMENT

‘ಸ್ವಾಮೀಜಿಯವರು ಗುರುವಾರ ರಾತ್ರಿಯೂ ಸ್ನಾನ, ಪೂಜೆ, ಪ್ರಸಾದ ಮಾಡಿದ್ದಾರೆ. ಆರೋಗ್ಯವಾಗಿದ್ದಾರೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಮಾತನಾಡಿ, ‘ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಈಗಾಗಲೇ ರೋಗ ನಿರೋಧಕ (ಆ್ಯಂಟಿ ಬಯೊಟಿಕ್ಸ್) ಔಷಧಿ ನೀಡಲಾಗಿದೆ. ಪದೇ ಪದೇ ಈ ರೀತಿ ಕಾಣಿಸಿಕೊಳ್ಳುವ ಸೋಂಕಿನಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ. ಅದಕ್ಕಾಗಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಚಿಕಿತ್ಸೆ ಅನಿವಾರ್ಯ’ ಎಂದು ಹೇಳಿದರು.

‘ಅದಕ್ಕಾಗಿ ನಮ್ಮ ರಾಜ್ಯ ಮತ್ತು ಹೊರ ರಾಜ್ಯದ ತಜ್ಞವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ. ಬೆಂಗಳೂರಿನಲ್ಲೂ ತಜ್ಞ ವೈದ್ಯರಿದ್ದಾರೆ. ಆದರೆ, ಚೆನ್ನೈನ ಡಾ.ಎಲ್.ಎನ್.ಕುಮಾರ್ ಅವರು ವಿಶ್ವದಲ್ಲಿಯೇ ಅತ್ಯುತ್ತಮ ತಜ್ಞ ವೈದ್ಯರಾಗಿದ್ದಾರೆ’ ಎಂದು ಹೇಳಿದರು.

ಸಿದ್ಧಗಂಗಾಮಠದ ಆಡಳಿತಾಧಿಕಾರಿ ನೀಡಿದ ಪತ್ರಿಕಾ ಪ್ರಕಟಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.