ADVERTISEMENT

ಜೆಡಿಎಸ್ ಶಾಸಕರ ಮನೆ ಸುತ್ತುತ್ತಿರುವ ಸಿದ್ದರಾಮಯ್ಯ: ಎಚ್‌.ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 15:45 IST
Last Updated 21 ಡಿಸೆಂಬರ್ 2020, 15:45 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ನೀವು ನನ್ನ ಭಜನೆ ನಿಲ್ಲಿಸಿದರೆ ನಿಮಗೇ ಒಳ್ಳೆಯದು. ನೀವು ಭಜನೆ ಮಾಡಿದಷ್ಟೂ ನಾನು ರಾಜಕೀಯದಲ್ಲಿ ಬಲಾಢ್ಯನಾಗುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ಪಕ್ಷದ ರಾಜ್ಯ ಘಟಕದ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ಮತ್ತು ನನ್ನನ್ನು ರಾಜಕೀಯದಿಂದ ಕಣ್ಮರೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್‌ ಅನ್ನು ಬಿಜೆಪಿಯ ‘ಬಿ ಟೀಮ್‌’ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ರಾಜಕೀಯದಲ್ಲಿ ಹೊಟ್ಟೆಪಾಡಿಗಾಗಿ ಈ ರೀತಿ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಐದು ವರ್ಷ ಅಧಿಕಾರದಲ್ಲಿದ್ದಾಗ ಮಹಾನ್‌ ಸಾಧನೆ ಮಾಡಿದ್ದೆ ಎಂದು ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದಾರೆ. ಭಾರಿ ಸಾಧನೆ ಮಾಡಿದ್ದಕ್ಕಾಗಿಯೇ ಕಾಂಗ್ರೆಸ್‌ ಸಂಖ್ಯೆ 78ಕ್ಕೆ ಕುಸಿಯಿತು. ಕರ್ನಾಟಕದಲ್ಲಿ ಕಾಂಗ್ರೆಸ್‌ ಶಕ್ತಿ ಏನು ಎಂಬುದು ತಿಳಿದಿದೆ. ಈಗ ಅವರು ಜೆಡಿಎಸ್‌ ಶಾಸಕರು, ಅಭ್ಯರ್ಥಿಗಳಾಗಿದ್ದವರ ಮನೆಗೆ ಸುತ್ತುತ್ತಿರುವುದೂ ಗೊತ್ತಿದೆ’ ಎಂದರು.

ADVERTISEMENT

ತಮ್ಮ ಹೋರಾಟದ ಫಲವಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ಬಂದು ಕೆಜೆಪಿ ಕಟ್ಟಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಸಿದ್ದರಾಮಯ್ಯ ಸ್ವಂತ ಬಲದಿಂದ ಮುಖ್ಯಮಂತ್ರಿ ಆಗಿಲ್ಲ. ಅವರು ಅಧಿಕಾರ ಹಿಡಿಯವುದಕ್ಕೆ ತಾವೇ ಕಾರಣ ಎಂದು ಹೇಳಿದರು.

ವಿಲೀನದ ಪ್ರಶ್ನೆಯೇ ಇಲ್ಲ

‘ನಮ್ಮ ಪಕ್ಷವನ್ನು ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಈ ಚರ್ಚೆ ಹುಟ್ಟು ಹಾಕಲಾಗಿದೆ. 2023ರಿಂದ ನನ್ನ ನೈಜ ಹೋರಾಟವನ್ನು ಆರಂಭಿಸುತ್ತೇನೆ. ನಾನು ಮುಖಂಡರನ್ನು ನಂಬಿ ರಾಜಕೀಯ ಮಾಡುವುದಿಲ್ಲ. ಕಾರ್ಯಕರ್ತರನ್ನು ನಂಬಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.