ADVERTISEMENT

ಅವಧಿ ಮೊಟಕು: ಸಿದ್ದರಾಮಯ್ಯ– ರಕ್ಷಾ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 16:37 IST
Last Updated 18 ಜುಲೈ 2021, 16:37 IST
ಸಿದ್ದರಾಮಯ್ಯ ಜೊತೆ ರಕ್ಷಾ ರಾಮಯ್ಯ ಚರ್ಚೆ ನಡೆಸಿದರು
ಸಿದ್ದರಾಮಯ್ಯ ಜೊತೆ ರಕ್ಷಾ ರಾಮಯ್ಯ ಚರ್ಚೆ ನಡೆಸಿದರು   

ಬೆಂಗಳೂರು: ಮುಂದಿನ ಮೂರು ವರ್ಷದ ತಮ್ಮ ಅಧ್ಯಕ್ಷ ಅವಧಿಯನ್ನು ಪಕ್ಷದ ಹೈಕಮಾಂಡ್ ಇತ್ತೀಚೆಗೆ ಒಂದು ವರ್ಷಕ್ಕೆ ಸೀಮಿತಗೊಳಿಸಿದ್ದರಿಂದ ನೊಂದಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಹೈಕಮಾಂಡ್‌ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಸೋಮವಾರ ದೆಹಲಿಗೆ ತೆರಳಲಿದ್ದು, ಮಂಗಳವಾರ ಸಂಜೆ ವರಿಷ್ಠರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಗೊಂದಲದ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದ ಮೊಹಮ್ಮದ್ ನಲಪಾಡ್ ಅವರನ್ನು ಅನರ್ಹಗೊಳಿಸಿದ್ದ ಹೈಕಮಾಂಡ್, ಎರಡನೇ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರೆಂದು ಘೋಷಿಸಿತ್ತು. ಹಲ್ಲೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ನಲಪಾಡ್‌ ಆರೋಪಿ ಎಂಬ ಕಾರಣಕ್ಕೆ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಹೈಕಮಾಂಡ್‌ಗೆ ನಲಪಾಡ್ ದೂರು ನೀಡಿದ್ದರು. ಇತ್ತೀಚೆಗೆ ರಕ್ಷಾ ಅವರ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿದ ಹೈಕಮಾಂಡ್‌, ನಂತರದ ಎರಡು ವರ್ಷದ ಅವಧಿಯನ್ನು ನಲಪಾಡ್‌ಗೆ ನೀಡಿದೆ.

ADVERTISEMENT

ತಮ್ಮ ಅಧ್ಯಕ್ಷ ಅವಧಿ ಮೊಟಕುಗೊಳಿಸಿರುವ ಸೂಚನೆಯನ್ನು ತಡೆಹಿಡಿಯುವಂತೆ ಹೈಕಮಾಂಡ್ ಬಳಿ ಪ್ರಸ್ತಾಪಿಸುವಂತೆ ಸಿದ್ದರಾಮಯ್ಯ ಬಳಿ ರಕ್ಷಾ ರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.