ಬೆಂಗಳೂರು: ‘ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ತಡೆಯುವ ವಿಚಾರದಲ್ಲಿ ನಮ್ಮ ತಪ್ಪಿನಿಂದ ಯಾವುದೇ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ‘ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ. 23 ಸಾವಿರ ಮಂದಿ ಪೈಕಿ 4,500 ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರ್ಕಾರ ಹೇಳಿದೆ. ಅವರನ್ನು ತಕ್ಷಣ ಪತ್ತೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಮೂರನೇ ಹಂತಕ್ಕೆ ನಾವು ಇನ್ನೂ ಹೋಗಿಲ್ಲ ಎಂದು ಸಚಿವರು ಹೇಳಿದ್ದಾರೆ. ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ, ಆತನಿಗೆ ವಿದೇಶದಿಂದ ಬಂದವರ ಸಂಪರ್ಕ ಇರಲಿಲ್ಲ. ಆದರೂ ಕೊರೊನಾ ಹೇಗೆ ಬಂತು ಎಂಬುದನ್ನು ಪತ್ತೆ ಮಾಡಬೇಕು. ಶಿರಾದಲ್ಲಿಯೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಇಬ್ಬರಿಗೂ ಸೋಂಕು ಯಾವ ಹಂತದಲ್ಲಿತ್ತು ಎಂಬುನ್ನು ಹೇಳಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಹೇಳಿದರು.
‘ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್, ಪಿಪಿಇ, ಟೆಸ್ಟಿಂಗ್ ಕಿಟ್‌ಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಬಂದಿರುವುದೂ ಗುಣಮಟ್ಟದ್ದಲ್ಲ. ಈಗ ದಾಸ್ತಾನಾಗಿರುವುದು ಯಾವುದಕ್ಕೂ ಸಾಲದು. ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ತಯಾರಿಕೆ ಕೆಲಸ ಭರದಿಂದ ಸಾಗಬೇಕಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಆ ಕೆಲಸ ವಹಿಸಬೇಕು. ಮೂರನೇ ಹಂತಕ್ಕೆ ಹೋಗುವುದನ್ನು ತಡೆಯುವ, ಅದನ್ನು ನಿಭಾಯಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕಿದೆ’ ಎಂದು ಅವರು ಆಗ್ರಹಿಸಿದರು.
‘ಅಗತ್ಯ ಪ್ರಮಾಣದ ಮಾಸ್ಕ್, ಸ್ಯಾನಿಟೈಸರ್ ಈಗಾಗಲೇ ಇರಬೇಕಿತ್ತು. ವೈದ್ಯರು ಮತ್ತು ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿ 6,020 ಪಂಚಾಯಿತಿಗಳಿವೆ. ಒಂದೊಂದು ಪಂಚಾಯಿತಿಗೆ ಒಬ್ಬ ವೈದ್ಯಕೀಯ ಅಧಿಕಾರಿ ನೇಮಕ ಮಾಡಬೇಕು. ಆಹಾರ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಅಧಿಕಾರಿಯನ್ನೂ ಪಂಚಾಯಿತಿಗೆ ಒಬ್ಬರಂತೆ ನೇಮಕ ಮಾಡಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
‘ಸಾಮಾಜಿಕ ಅಂತರ ಕಾಪಾಡುವುದೂ ಮುಖ್ಯ. ಅದೇ ರೀತಿ ರೈತರ ಹಿತವನ್ನೂ ಕಾಯಬೇಕು. ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಬಿತ್ತನೆ ಆರಂಭವಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ. ಕೃಷಿ ಚಟುವಟಿಕೆ ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಬಿತ್ತನೆಗೆ ಮುಂದಾಗುವವರಿಗೆ ಬೀಜ, ಗೊಬ್ಬರ ಸಿಗುವಂತಾಗಬೇಕು’ ಎಂದು ಅವರು ಹೇಳಿದರು.
‘ಬೆಂಗಳೂರು ನಗರದಲ್ಲಿ ವಲಸಿಗರು ಹೆಚ್ವಿನ ಸಂಖ್ಯೆಯಲ್ಲಿ ಇದ್ಸಾರೆ. ಹೊರ ರಾಜ್ಯಗಳಲ್ಲಿ ಇದ್ದ ನಮ್ಮವರು ಇಲ್ಲಿಗೆ, ನಮ್ಮಲ್ಲಿರುವ ಹೊರ ರಾಜ್ಯಗಳವರು ಸ್ವಂತ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಕನ್ನಡಿಗರನ್ನು ಹೊರ ರಾಜ್ಯಗಳಿಂದ ಕರೆ ತರಬೇಕು. ಈಗಾಗಲೇ ಸಾಕಷ್ಟು ಮಂದಿ ಗಡಿ ತಲುಪಿದ್ದಾರೆ. ಅವರಿಗೆ ರಕ್ಷಣೆ ನೀಡುವುದು ಅವಶ್ಯ. ಅವರ ಆರೋಗ್ಯ ತಪಾಸಣೆ ಮಾಡಿ ಊರುಗಳಿಗೆ ಕಳುಹಿಸುವುದು ಸೂಕ್ತ’ ಎಂದೂ ಸಲಹೆ ನೀಡಿದರು.
‘ಮುಂದಿನ ಎರಡು ವಾರ ಪರಿಸ್ಥಿತಿ ಕಠಿಣ. ಹೀಗಾಗಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಈಗಾಗಲೇ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು' ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.