ADVERTISEMENT

ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 10:31 IST
Last Updated 21 ಆಗಸ್ಟ್ 2019, 10:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ:‘ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ), ಆರ್‌ಬಿಐ ಸೇರಿದಂತೆ ಪ್ರಮುಖ ಸಂಸ್ಥೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ಸಿಬಿಐನಿಂದ ಫೋನ್‌ ಕದ್ದಾಲಿಕೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಇಲ್ಲಿ ಟೀಕಿಸಿದರು.

‘ಅಮಿತ್ ಶಾ ನಿರ್ದೇಶನದ ಮೇರೆಗೆ ಯಡಿಯೂರಪ್ಪ ರಾಜಕೀಯ ದ್ವೇಷ ಸಾಧಿಸುವುದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ನನ್ನ ಸಲಹೆ ಮೇರೆಗೆ ಸಿಬಿಐಗೆ ನೀಡಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ನೂರಕ್ಕೆ ನೂರರಷ್ಟು ಸುಳ್ಳು’ ಎಂದು ಹೇಳಿದರು.

‘ಸಿಬಿಐ ಬಗ್ಗೆ ಬಿಜೆಪಿಯವರಿಗೆ ಈ ಮೊದಲು ವಾಕರಿಕೆ ಇತ್ತು. ಸಿಬಿಐ ಎಂದರೆ ಚೋರ್‌ ಬಚಾವ್‌ ಸಂಸ್ಥೆ ಎಂದು ಕರೆಯುತ್ತಿದ್ದರು. ಆದರೆ, ಈಗ ಸಿಬಿಐ ಬಗ್ಗೆ ವ್ಯಾಮೋಹ ಬಂದಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ನಯಾಪೈಸೆ ಕೊಟ್ಟಿಲ್ಲ:

‘ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ ₹1 ಲಕ್ಷ ಕೋಟಿ ನಷ್ಟವಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಮುಖ್ಯಮಂತ್ರಿ ಅವರು ಪ್ರಧಾನಿಯನ್ನು ಭೇಟಿ ಮಾಡಿದರೂ ಇದುವರೆಗೆ ಕೇಂದ್ರ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. ಕೇಂದ್ರ, ರಾಜ್ಯಗಳಲ್ಲಿ ಅವರದ್ದೇ ಸರ್ಕಾರ ಇದೆ. ಹೀಗಿದ್ದರೂ ಪರಿಹಾರ ಕೊಡಲು ಇವರಿಗೇನು ರೋಗ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಪ್ರವಾಹ ನಷ್ಟ ಎಷ್ಟಾಗಿದೆ ಎಂಬ ಮನವಿಯನ್ನೇ ರಾಜ್ಯ ಸರ್ಕಾರ ಇನ್ನೂ ಕೇಂದ್ರಕ್ಕೆ ಸಲ್ಲಿಸಿಲ್ಲ. ನಷ್ಟದ ಪ್ರಾಥಮಿಕ ಅಂದಾಜು ಇನ್ನೂ ತಯಾರಿಸಿಲ್ಲ’ ಎಂದು ಟೀಕಿಸಿದರು.

ಬಿಎಸ್‌ವೈ ಗಡಗಡ:

‘ಮೋದಿ ಕಂಡರೆ ಯಡಿಯೂರಪ್ಪ ಗಡಗಡ ನಡುಗುತ್ತಾರೆ. ಯಾವ ಕಾರಣಕ್ಕಾಗಿ ಈ ರೀತಿ ಭಯಪಡುತ್ತಾರೋ ಗೊತ್ತಿಲ್ಲ. ಮೋದಿ ಜೊತೆ ಮಾತನಾಡಲು, ಪರಿಹಾರ ಕೇಳಲು ನಿಮಗೆ ಆಗದಿದ್ದರೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ. ನಾವು ಮಾತನಾಡುತ್ತೇವೆ’ ಎಂದು ಹೇಳಿದರು.

‘ಅಮಿತ್ ಶಾ ಮರ್ಜಿಯಲ್ಲಿ ಯಡಿಯೂರಪ್ಪ ಇದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಸಂವಿಧಾನದ ಬಗ್ಗೆ ಬಿಜೆಪಿ ನಾಯಕರಿಗೆ ಗೌರವ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.