ADVERTISEMENT

2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿದ್ದರಾಮಯ್ಯ

ಸ್ಪರ್ಧೆ ಮಾಡಲೇಬೇಕೆಂದು ಸ್ನೇಹಿತರು, ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 15:41 IST
Last Updated 27 ಅಕ್ಟೋಬರ್ 2025, 15:41 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು:‘2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ನ್ಯೂಸ್ 18’ ಕನ್ನಡ ಸುದ್ದಿವಾಹಿನಿ ಆಯೋಜಿಸಿದ್ದ ‘ರೈಸಿಂಗ್ ಕರ್ನಾಟಕ’ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ‘ಹಿಂದೆ ನಾನು 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದೆ’ ಎಂದರು.

ADVERTISEMENT

‘ಆದರೆ ಈಗ, 2028ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ ಮಾಡಲೇಬೇಕು ಎಂದು ನನ್ನ ಸ್ನೇಹಿತರು, ಬೆಂಬಲಿಗರು ಹೇಳುತ್ತಿದ್ದಾರೆ. ನೀವು ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ. ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಇದರ ಬಗ್ಗೆ ಇನ್ನೂ ಗಂಭೀರವಾಗಿ ಯೋಚಿಸಿಲ್ಲ’ ಎಂದಿದ್ದಾರೆ.

‘ಐದು ವರ್ಷ ಇರಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಹೈಕಮಾಂಡ್‌ನವರ ತೀರ್ಮಾನ ಅಂತಿಮ’ ಎಂದೂ ಸಿದ್ದರಾಮಯ್ಯ ಹೇಳಿದರು.

‘ಸಂಪುಟ ಪುನರ್‌ ರಚನೆ ಮಾಡಿ, ಹೊಸಬರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್‌ನವರು 3– 4 ತಿಂಗಳ ಹಿಂದೆಯೇ ಹೇಳಿದ್ದಾರೆ. ಆಗ ನಾನು ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿ ಎಂದು ಹೇಳಿದ್ದೆ. ಈಗ ಹೈಕಮಾಂಡ್‌ನವರು ಒಪ್ಪಿಗೆ ಕೊಟ್ಟರೆ ಸಂಪುಟ ಪುನರ್‌ ರಚನೆ ಮಾಡುತ್ತೇನೆ’ ಎಂದರು. 

‘ಜನಾಶೀರ್ವಾದ ಎಲ್ಲಿಯವರೆಗೆ ಇರುತ್ತೊ ಅಲ್ಲಿವರೆಗೆ ನಾನು ಅಧಿಕಾರದಲ್ಲಿರುತ್ತೇನೆ. ಯಾವುದೇ ದಾಖಲೆಯ (ದೇವರಾಜ ಅರಸು ಅವರ ದಾಖಲೆ) ಮೇಲೆ ನಂಬಿಕೆ ಇಲ್ಲ. ಜನರ ಕಷ್ಟಗಳು, ಕಾರ್ಪಣ್ಯಗಳಿಗೆ ನೆರವಾಗುವುದು ಮುಖ್ಯ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.