ADVERTISEMENT

ಆಡಿಯೊ ಪ್ರಕರಣ ಎಸ್‌ಐಟಿಗೆ ವಹಿಸುವುದು ಸಿಎಂಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 10:47 IST
Last Updated 25 ಫೆಬ್ರುವರಿ 2019, 10:47 IST
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವುದು, ಬಿಡುವುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಈ ವಿಷಯ ನನಗೆ ಗೊತ್ತಿಲ್ಲ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

‘ಎಸ್‌ಐಟಿ ರಚನೆ ಮೂಲಕ ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸಿಕ್ಕಿಸಲು ಸಿದ್ದರಾಮಯ್ಯ ಯತ್ನಿಸಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ’ ಎಂಬ ವಿರೋಧ ಪಕ್ಷಗಳ ಮುಖಂಡರ ಆರೋಪದ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳ ಮುಖಂಡರು ವಿರೋಧಿಸುವುದಕ್ಕಾಗಿ ಹೇಳಿಕೆ ನೀಡುತ್ತಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಅದೇಗೆ ಸಾಧ್ಯ? ಎಂದರು.

ಬಿಜೆಪಿಗಿಂತ ಮುಂದೆ ಇದ್ದೇವೆ?

ADVERTISEMENT

ಲೋಕಸಭಾ ಚುನಾವಣಾ ಪ್ರಚಾರ, ಸಿದ್ಧತೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ ಮುಂದಿದೆ. ಮಾ.9ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಾವೇರಿಯಲ್ಲಿ ಪಕ್ಷದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಆಕಾಂಕ್ಷಿ ಅಲ್ಲ

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೊಪ್ಪಳ, ಮೈಸೂರು, ಧಾರವಾಡ ಸೇರಿದಂತೆ ಯಾವುದೇ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅದೆಲ್ಲಾ ಊಹಾಪೋಹ. ನಾನು ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್‌ ಸಹ ನನಗೆ ಹೇಳಲ್ಲ’ ಎಂದರು.

ಒಮ್ಮತದ ವಿಶ್ವಾಸ

ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್ ನಡುವೆ ಇಂದು ಮೊದಲ ಸುತ್ತಿನ ಮಾತುಕತೆ ನಡೆಯಲಿದೆ. ಸೀಟು ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಯಾವಾವ ಕ್ಷೇತ್ರದಲ್ಲಿ ಯಾವ ಪಕ್ಷದವರಿಗೆ ಗೆಲ್ಲುವ ಸಾಮಾರ್ಥ್ಯವಿದೆಯೋ ಅವರಿಗೆ ಆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಲಾಗುವುದು. ಈ ಬಗ್ಗೆ ಸಮನ್ವಯ ಸಮಿತಿ ಹಾಗೂ ಎರಡೂ ಪಕ್ಷಗಳ ವರಿಷ್ಠರ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ’ ಎಂದು ಹೇಳಿದರು.

‘ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕೆಂದು ಅಂಬರೀಷ್‌ ಅಭಿಮಾನಿಗಳಿಂದ ಒತ್ತಡ ಹೆಚ್ಚಾಗಿದೆ. ಈ ಸಂಬಂಧ ಸುಮಲತಾ ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ’ ಎಂದರು.

ಕಾಂಗ್ರೆಸ್‌ನಿಂದ ಅನ್ಯಾಯ: ಬಿಎಸ್‌ವೈ

ಹುಬ್ಬಳ್ಳಿ: ‘ದಲಿತರಿಗೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ ಎಂಬುದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಹೇಳಿಕೆಯೇ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಲಿತರಿಗೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಗಿದೆ ಎಂಬ ಪರಮೇಶ್ವರ್‌ ಹೇಳಿಕೆ ಸತ್ಯ. ಈ ಹಿಂದೆಯೇ ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಕಾಂಗ್ರೆಸ್‌ನವರೇ ತಪ್ಪಿಸಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.