ಎಚ್.ಸಿ. ಮಹದೇವಪ್ಪ
ಮೈಸೂರು: ‘ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ, ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಎಲ್ಲ ಚರ್ಚೆಯೂ ಮುಗಿಯಿತಲ್ಲ ಬಿಡಿ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಂಕ್ರಾಂತಿಯಂತೂ ನಡೆದೇ ನಡೆಯುತ್ತದೆ. ನಾಯಕತ್ವ ಬದಲಾವಣೆ ಇಲ್ಲವೆಂದು ಮುಖ್ಯಮಂತ್ರಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ ಮೇಲೆ ಮತ್ತೇಕೆ ಪ್ರಶ್ನೆ ಕೇಳುತ್ತೀರಿ?’ ಎಂದರು.
‘ಡಿಕೆಶಿ ಪಕ್ಷ ಕಟ್ಟಿದ್ದಾರೆ, ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ’ ಎಂಬ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರೂ ಸೇರಿದರೆ ಅಲ್ವಾ ಕಟ್ಟುವುದಕ್ಕೆ ಆಗುವುದು? ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಸೇರಿ ಪಕ್ಷ ಕಟ್ಟಿದ್ದೇವೆ. ಅದರಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ನಾವು ಇಲ್ಲ ಎನ್ನಲಾಗುತ್ತದೆಯೇ? ಎಂದು ಕೇಳಿದರು.
‘ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ಲವೇ? ಯಾರ‍್ಯಾರಿಗೆ ಪಕ್ಷ ಏನೇನು ಜವಾಬ್ದಾರಿ ಕೊಟ್ಟಿದೆಯೋ ಅದನ್ನು ನಿರ್ವಹಿಸಿದ್ದಾರೆ. ಪ್ರಸ್ತಾಪಗಳು ಬಹಳಷ್ಟು ಬರುತ್ತವೆ. ಹೈಕಮಾಂಡ್ ಈಗಾಗಲೇ ನಿರ್ಧಾರ ಕೈಗೊಂಡಾಗಿದೆ. 5 ವರ್ಷ ನಾನೇ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವಾಗ ಯಾವುದೇ ಪ್ರಶ್ನೆ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.