ನಿತಿನ್ ಗಡ್ಕರಿ ಅವರಿಗೆ ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದರು. ಗೃಹ ಸಚಿವ ಜಿ.ಪರಮೇಶ್ವರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು.
ನವದೆಹಲಿ: ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮನವಿ ಸಲ್ಲಿಸಿದರು.
ಸಂಚಾರ ದಟ್ಟಣೆ ಹೆಚ್ಚಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಅವರು ಕೋರಿದರು.
ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕಂದಾಯ ಇಲಾಖೆಯೊಂದಿಗೆ ಹಾಗೂ ಅರಣ್ಯ ತೀರುವಳಿ ಪ್ರಕ್ರಿಯೆ ತ್ವರಿತಗೊಳಿಸಲು ಅರಣ್ಯ ಇಲಾಖೆಯೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಕಾರ್ಯಗಳನ್ನು ಚುರುಕುಗೊಳಿಸಲು ಇಲಾಖೆಗೊಂದಿಗೆ ಸಭೆ ನಡೆಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಗಡ್ಕರಿ ಅವರ ಗಮನಕ್ಕೆ ತಂದರು.
ರಾಜ್ಯದ ಪ್ರಸ್ತಾವ...
*ಮೈಸೂರಿನ ರಾಷ್ಟ್ರೀಯ ಹೆದ್ದಾರಿ -275ರಲ್ಲಿ 9 ಗ್ರೇಡ್ ಸಪರೇಟರ್‌ಗಳ ನಿರ್ಮಾಣ ಯೋಜನೆಗೆ ಮಂಜೂರಾತಿ ನೀಡಬೇಕು
*ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿ ಘಾಟಿಯಲ್ಲಿ ಸುರಂಗ ನಿರ್ಮಾಣ ಮಾಡುವ ಯೋಜನೆ ಕೈಗೆತ್ತಿಕೊಳ್ಳಬೇಕು
*ಪುಣೆ- ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಬೇಕು
*2025–26ರ ವಾರ್ಷಿಕ ಯೋಜನೆಯಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಮೊತ್ತವನ್ನು ₹24 ಸಾವಿರ ಕೋಟಿಗೆ ಹೆಚ್ಚಿಸಬೇಕು
*ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು
*ತಾತ್ವಿಕವಾಗಿ ಘೋಷಿಸಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು
*ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸುರಂಗದ ನಿರ್ಮಾಣ ಮತ್ತು ಹೊಸೂರು ರಸ್ತೆ ಮಾರ್ಗವಾಗಿ ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿ ಸುರಂಗ ನಿರ್ಮಾಣ ಮಾಡಬೇಕು
*ಬೆಳಗಾವಿ ನಗರದ ರಾ.ಹೆ-4 ರಲ್ಲಿ ಎತ್ತರಿಸಿದ ಕಾರಿಡಾರ್ ನಿರ್ಮಾಣ ಮಾಡಬೇಕು
*ಕಲಬುರ್ಗಿ-ವಾಡಿ-ಯಾದಗಿರಿ-ಕೆಂದೆಚೂರ್-ಜಡ್ ಚೇರ್ಲಾ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ.
*ಯಾದಗಿರಿ ಜಿಲ್ಲೆಯಲ್ಲಿ ರಾ.ಹೆ 150ಎಯಲ್ಲಿ ಭೀಮರಾಯನಗುಡಿ ಮತ್ತು ಶಹಾಪುರ ಪಟ್ಟಣಕ್ಕೆ ಗ್ರೀನ್ ಫೀಲ್ಡ್ ಸಂಯೋಜಿತ ಬೈಪಾಸ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.