ADVERTISEMENT

ಮೈತ್ರಿ ಇದ್ದಾಗ ಸಮಸ್ಯೆ ಸಹಜ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 9:12 IST
Last Updated 27 ಜೂನ್ 2019, 9:12 IST
   

ಹುಬ್ಬಳ್ಳಿ: ಎರಡು ಪಕ್ಷಗಳು ಸೇರಿ ಅಧಿಕಾರ ನಡೆಸುವಾಗ ಸಮಸ್ಯೆ ಸಹಜ; ಅವುಗಳನ್ನು ಸರಿಪಡಿಸಿಕೊಂಡು ಸರ್ಕಾರ ಮುಂದುವರಿಸುತ್ತೇವೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬದಾಮಿಗೆ ತೆರಳುವ ಮುನ್ನ ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ನಮ್ಮ ಸೋಲಿಗೆ ಹಲವಾರು ಕಾರಣಗಳಿವೆ. ಮೈತ್ರಿ ಮಾಡಿಕೊಂಡಿದ್ದೇ ಸೋಲಿಗೆ ಕಾರಣ ಎಂದು ಯಾರೂ ಹೇಳಿಲ್ಲ. ಎಲ್ಲ ವಿಷಯಗಳನ್ನೂ ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ’ ಎಂದರು.

‘ಪಕ್ಷದ ಸಭೆಯಲ್ಲಿ ಕೆಸಿಸಿಸಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಹಾಗೂ ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತು ಚರ್ಚಿಸಿದ್ದೇವೆ. ಬ್ಲ್ಯಾಕ್‌ ಮತ್ತು ಬೂತ್‌ ಕಮಿಟಿಗಳ ನಡುವೆ ಸಂವಹನ ಸಾಧಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಮಿಟಿ ರಚಿಸುತ್ತೇವೆ’ ಎಂದರು.

ADVERTISEMENT

ವೋಟ್‌ ಹಾಕೋದು ಮೋದಿಗೆ, ಕೆಲಸ ನನ್ನ ಬಳಿ ಕೇಳ್ತಿರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

ಪಕ್ಷ ಸಂಘಟನೆಗೆ ಅಹಿಂದ ಸಮಾವೇಶ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ‘ಕಾಂಗ್ರೆಸ್ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ. ನಾವು ಅಹಿಂದ ಪರ ಇದ್ದೇವೆ. ಪ್ರತ್ಯೇಕವಾಗಿ ಸಮಾವೇಶ ಮಾಡುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.

ಮಧ್ಯಂತರ ಚುನಾವಣೆ ಬರಬಹುದು ಎನ್ನುವ ಬಸವರಾಜ ಹೊರಟ್ಟಿ ಹೇಳಿಕೆಗೆ ‘ಕೆಲವರಿಗೆ ದಿವ್ಯಜ್ಞಾನ ಇರುತ್ತದೆ. ಅದರ ಆಧಾರದ ಮೇಲೆ ಅವರು ಹೇಳಿಕೆ ಕೊಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ‌, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಕ್ಷದ ಪ್ರಮುಖರಾದ ವಿನಯ ಕುಲಕರ್ಣಿ, ಆಲ್ಕೋಡ ಹನುಮಂತಪ್ಪ, ಸದಾನಂದ ಡಂಗನವರ, ಇಸ್ಮಾಯಿಲ್‌ ತಮಟಗಾರ, ಬಂಗಾರೇಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.