ADVERTISEMENT

ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ, ಅಮೃತೋತ್ಸವ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 14:49 IST
Last Updated 2 ಆಗಸ್ಟ್ 2022, 14:49 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ: ‘ದಾವಣಗೆರಿಯಲ್ಲಿ ನಡೆಯುವುದು ಸಿದ್ದರಾಮೋತ್ಸವ ಅಲ್ಲ. ನಾಳೆ(ಬುಧವಾರ) ನನಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು, ಹಿತೈಷಿಗಳು ಸೇರಿ ಅಮೃತೋತ್ಸವ ಆಚರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೀವನದಲ್ಲಿ ಇದೊಂದು ಮಹತ್ತರ ಮೈಲಿಗಲ್ಲು. ಶಕ್ತಿ ಪ್ರದರ್ಶನ, ಮುಖ್ಯಮಂತ್ರಿಯಾಗಲು ಹೀಗೆ ಮಾಡುತ್ತಿದ್ದಾರೆ ಎನ್ನುವುದೆಲ್ಲ ಮಾಧ್ಯಮ ಸೃಷ್ಟಿ ಎಂದರು.

ನಮ್ಮಲ್ಲಿ ಯಾವ ಬಣವೂ ಇಲ್ಲ, ಇರುವುದೊಂದೇ ಬಣ್ಣ, ಅದು ಸೋನಿಯಾ ಗಾಂಧಿ ಬಣ’ ಎಂದು ಹೇಳಿದರು.

ADVERTISEMENT

‘ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ ಇಂಡಿಯಾ ಶೈನಿಂಗ್ ಎಂದಿದ್ದರು. ಅದಾಗಿದೆಯೇ?’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಬಿಜೆಪಿ ಸಹ ಮುಂದಿನ ವಿಧಾನಸಭಾ ಚುನಾವಣೆ ಸಂಬಂಧಿಸಿ 150 ಮಿಷನ್ ಕನಸು ಕಾಣುತ್ತಿದ್ದಾರೆ. ಆದರೆ, ಜನ ಚುನಾವಣೆ ಯಾವಾಗ ಎಂದು ಕಾಯುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿಲ್ಲ

‘ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿಲ್ಲ. ಮತ ವಿಭಜನೆಗಾಗಿ ಬಿಜೆಪಿಯೇ ಅವುಗಳನ್ನು ಸಾಕಿಕೊಂಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್‌ ಎಂದೂ ಅಡ್ಡಿಯಾಗಿಲ್ಲ. ಯಾವ ಸಂಘಟನೆಯಾದರೂ ಪ್ರಾಣ ತೆಗೆಯಲು ಮುಂದಾದರೆ ಸಹಿಸಲು ಸಾಧ್ಯವಿಲ್ಲ. ಸಂಘಟನೆಗಳ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡದೆ, ಸಾಕ್ಷ್ಯಾಧಾರಗಳಿದ್ದರೆ ನಿಷೇಧಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯದಿಂದ ಮಂಗಳೂರಿನಲ್ಲಿ ಯುವಕರ ಹತ್ಯೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅದರ ಹೊಣೆ ಹೊರಬೇಕು. ಹತ್ಯೆ ಖಂಡಿಸಿ ಬಿಜೆಪಿಯ ಸಂಘ–ಪರಿವಾರದವರೇ ಪ್ರತಿಭಟನೆ ನಡೆಸಿದ್ದಾರೆ. ಅವರಿಗೇ ರಕ್ಷಣೆ ನೀಡಲು ಸಾಧ್ಯವಿಲ್ಲದ ಸರ್ಕಾರ ಉಳಿದವರಿಗೆ ಹೇಗೆ ನೀಡುತ್ತದೆ? ಇದನ್ನೆಲ್ಲ ನೋಡಿದರೆ ಸರ್ಕಾರ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ರಾಜೀನಾಮೆ ನೀಡಿ ಚುನಾವಣೆಗೆ ತೆರಳಲಿ’ ಎಂದು ಹೇಳಿದರು.

‘ಮಂಗಳೂರಿನಲ್ಲಿ ಹತ್ಯೆಯಾದ ಪ್ರವೀಣ್‌ ಮನೆಗೆ ಮುಖ್ಯಮಂತ್ರಿ ತೆರಳಿ ಪರಿಹಾರ ನೀಡುತ್ತಾರೆ. ಆದರೆ ಫಾಸಿಲ್ ಮನೆಗೆ ಹೋಗದೆ ತಾರತಮ್ಯ ಮಾಡಿದ್ದಾರೆ. ಅವರು ಒಂದು ಧರ್ಮದ ಅಥವಾ ವರ್ಗದ ಮುಖ್ಯಮಂತ್ರಿ ಅಲ್ಲ, ಆರೂವರೆ ಕೋಟಿ ಜನರ ಪ್ರತಿನಿಧಿ. ಹತ್ಯೆಯಾದವರ ಕುಟುಂಬದವರಿಗೆ ಪರಿಹಾರ ನೀಡುವ ಪರಿಪಾಠ ಆರಂಭಿಸಿದ್ದೇ ಅವರು, ಹೀಗಿದ್ದಾಗ ಎಲ್ಲರಿಗೂ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.