ADVERTISEMENT

ಸಿಎಲ್‌ಪಿ, ವಿರೋಧ ಪಕ್ಷ ನಾಯಕ ಸ್ಥಾನ ಇಬ್ಭಾಗ ಬೇಡ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 20:12 IST
Last Updated 18 ಜನವರಿ 2020, 20:12 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ (ಸಿಎಲ್‌ಪಿ) ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಗಳು ಒಟ್ಟಿಗೆ ಇರಬೇಕು. ಅವು ಇಬ್ಭಾಗ ಆಗಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ರಾಜ್ಯದಲ್ಲಿ ಇಲ್ಲಿವರೆಗೆ ಸಿಎಲ್‌ಪಿ ಹಾಗೂ ವಿರೋಧ ಪಕ್ಷ ನಾಯಕ ಸ್ಥಾನಗಳು ಬೇರೆ ಆಗಿಲ್ಲ. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ಹೈಕಮಾಂಡ್‌ ಭೇಟಿಯಾದಾಗ ರಾಜೀನಾಮೆ ವಾಪಸ್‌ ಪಡೆಯುವ ಬಗ್ಗೆ ಚರ್ಚೆ ನಡೆದಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.

ಕುಗ್ಗಿದ ಕಲಾಪಗಳ ಚರ್ಚಾ ಗುಣಮಟ್ಟ: ಇತ್ತೀಚೆಗೆ ವಿಧಾನಸಭೆ ಕಲಾಪಗಳಲ್ಲಿನ ಚರ್ಚೆಯ ಗುಣಮಟ್ಟ ಕುಗ್ಗಿದೆ. 2018ರಲ್ಲಿ ಕೇವಲ 17 ದಿನ ಕಲಾಪ ನಡೆದಿದೆ. 2019ರಲ್ಲಿ 18 ದಿನ ನಡೆದಿದೆ. ಆದರೆ, 2020ರಲ್ಲಿ ಚರ್ಚೆಯೇ ನಡೆದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದ ಬಜೆಟ್‌ ಮೊತ್ತ ₹2,34,000 ಕೋಟಿ. ಬಜೆಟ್‌ ಹಣ ಖರ್ಚಾಗಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು.ಜನರ ತೆರಿಗೆ ಹಣ ಖರ್ಚಾಗಿರುವ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರಿಸಬೇಕು. ಆದರೆ, ಈಗಿನಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಂಡರಾಗಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ಕಲಾಪಗಳಲ್ಲಿ ಚರ್ಚೆ ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.