
ಪ್ರಲ್ಹಾದ ಜೋಶಿ, ಸಿದ್ದರಾಮಯ್ಯ
ಬೆಂಗಳೂರು: ‘ಕೃಷಿ ವೆಚ್ಚ ಮತ್ತು ಕಬ್ಬಿನ ಬೆಲೆಯ ನಡುವಿನ ಅಂತರ ಹೆಚ್ಚಲು ಕೇಂದ್ರ ಸರ್ಕಾರವೇ ಕಾರಣ. ಅದನ್ನು ತಪ್ಪಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಬರೆದ ಪತ್ರಕ್ಕೆ ಉತ್ತರಿಸಿರುವ ಅವರು, ‘ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ಶೇ 10.25 ಇಳುವರಿ ಪ್ರಮಾಣಕ್ಕೆ ನಿಗದಿಪಡಿಸಿದ ₹ 3,550 ನ್ಯಾಯಯುತ ಮತ್ತು ಲಾಭದಾಯಕ ದರವನ್ನು (ಎಫ್‌ಆರ್‌ಪಿ) ಪ್ರಮುಖ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಎನ್‌ಡಿಎ ಆಡಳಿತಾವಧಿಯಲ್ಲಿ ಸತತ ಎರಡು ವರ್ಷಗಳ ಕಾಲ ಎಫ್‌ಆರ್‌ಪಿ ಹೆಚ್ಚಿಸಿಲ್ಲ. ಇದು ರೈತರಿಗೆ ಹೆಚ್ಚಿನ ನಷ್ಟ ಉಂಟು ಮಾಡಿದೆ’ ಎಂದಿದ್ದಾರೆ.
‘ಎಥೆನಾಲ್ ಮಿಶ್ರಣ ಮತ್ತು ಹೆಚ್ಚಿದ ಎಥೆನಾಲ್ ಸಂಗ್ರಹಣೆಯನ್ನು ಸಕ್ಕರೆ ವಲಯಕ್ಕೆ ವರದಾನವೆಂದು ಪತ್ರದಲ್ಲಿ ಉಲ್ಲೇಖಿಸಿದ್ದೀರಿ. ಆದರೆ, 2023ರ ವೇಳೆಗೆ ಎಥೆನಾಲ್ ಮಿಶ್ರಣವು ಶೇ 10ಕ್ಕೆ ತಲುಪಿದ್ದರೂ, ವಾಸ್ತವವಾಗಿ ಅದಕ್ಕಿಂತ ಹೆಚ್ಚಿದೆ. ಕರ್ನಾಟಕದ ಡಿಸ್ಟಿಲರಿಗಳಿಂದ ಎಥೆನಾಲ್ ಪೂರೈಕೆಯು 2022-23ರಲ್ಲಿ 38 ಕೋಟಿ ಲೀಟರ್‌ಗಳಿಂದ 2024-25ರಲ್ಲಿ ಕೇವಲ 47 ಕೋಟಿ ಲೀಟರ್‌ಗಳಿಷ್ಟೆ ಹೆಚ್ಚಾಗಿದೆ. ಆದರೆ, ಸ್ಥಾಪಿತ ಸಾಮರ್ಥ್ಯವು 270 ಕೋಟಿ ಲೀಟರ್‌ಗಳಷ್ಟಿದೆ. ಎಥೆನಾಲ್ ಮಿಶ್ರಣದ ಪ್ರಯೋಜನವನ್ನು ರೈತರಿಗೆ ಏಕೆ ವರ್ಗಾಯಿಸಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.