ADVERTISEMENT

ಮೋದಿ ಕಾಲರ್ ಹಿಡಿದು ಉಗ್ರಪ್ಪ ಯೋಜನೆ ತರುತ್ತಾರೆ: ಸಿದ್ದರಾಮಯ್ಯ ಟೀಕೆ

ರೋಡ್‌ ಶೋದಲ್ಲಿ ಶ್ರೀರಾಮುಲು ವಿರುದ್ಧ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 17:49 IST
Last Updated 22 ಅಕ್ಟೋಬರ್ 2018, 17:49 IST
ಹೂವಿನಹಡಗಲಿ ತಾಲ್ಲೂಕು ಹಿರೇಮಲ್ಲನಕೆರೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಚಿತ್ರದಲ್ಲಿದ್ದಾರೆ- – ಪ್ರಜಾವಾಣಿ ಚಿತ್ರ
ಹೂವಿನಹಡಗಲಿ ತಾಲ್ಲೂಕು ಹಿರೇಮಲ್ಲನಕೆರೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಚಿತ್ರದಲ್ಲಿದ್ದಾರೆ- – ಪ್ರಜಾವಾಣಿ ಚಿತ್ರ   

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ‘ಲೋಕಸಭೆಯಲ್ಲಿ ಶ್ರೀರಾಮುಲು, ಶಾಂತಾ ಜಿಲ್ಲೆಯ ಸಮಸ್ಯೆ ಕುರಿತು ಧ್ವನಿ ಎತ್ತಿಲ್ಲ. ಅವರದೇ ಸರ್ಕಾರವಿದ್ದರೂ ಯೋಜನೆಗಳನ್ನು ತಂದಿಲ್ಲ. ಉಪ ಚುನಾವಣೆಯಲ್ಲಿ ಉಗ್ರಪ್ಪನವರನ್ನು ಆಯ್ಕೆ ಮಾಡಿದಲ್ಲಿ ಪ್ರಧಾನಿ ಮೋದಿಯ ಕಾಲರ್ ಹಿಡಿದು ಜಿಲ್ಲೆಗೆ ಯೋಜನೆಗಳನ್ನು ತರುತ್ತಾರೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಮತಯಾಚಿಸಿ ಅವರು ಮಾತನಾಡಿದರು.

‘ಬಿಜೆಪಿಯ ಶ್ರೀರಾಮುಲು, ಶಾಂತಾ ಆಂಧ್ರದವರು. ಕನ್ನಡ ಗೊತ್ತಿಲ್ಲದವರನ್ನು ತಿರಸ್ಕರಿಸಿ, ಕನ್ನಡ ತಾಯಿಯ ಮಗ ಉಗ್ರಪ್ಪನವರನ್ನು ಗೆಲ್ಲಿಸಿ. ಜನಾದೇಶವನ್ನು ಧಿಕ್ಕರಿಸಿ ಉಪ ಚುನಾವಣೆ ಹೇರಿರುವರಿಗೆ ಪಾಠ ಕಲಿಸಿ’ ಎಂದರು.

ADVERTISEMENT

‘ಉಗ್ರಪ್ಪ ಅವರ ಅಡ್ರೆಸ್‌ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ. ಬಾದಾಮಿ ಹಾಗೂ ಮೊಳಕಾಲ್ಮೂರಿಗೆ ಶ್ರೀರಾಮುಲು ಹೊರಗಿನ ಅಭ್ಯರ್ಥಿ ಆಗಿರಲಿಲ್ಲವೇ? ಆಗ ಅವರ ಅಡ್ರೆಸ್‌ ಎಲ್ಲಿತ್ತು' ಎಂದು ಪ್ರಶ್ನಿಸಿದರು.

ರಿಪಬ್ಲಿಕ್ ಆಫ್‌ ಬಳ್ಳಾರಿ: ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ರಿಪಬ್ಲಿಕ್ ಆಫ್‌ ಬಳ್ಳಾರಿ ಎಂದು ಯಾರ ಕಾಲದಲ್ಲಿ ಬರೆದಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಿ. ದುಷ್ಟರು ಯಾರು, ಶಿಷ್ಟರು ಯಾರು ಎಂದು ಗೊತ್ತಾಗುತ್ತದೆ’ ಎಂದರು.

ಶ್ರೀರಾಮುಲು, ಕಾಂಗ್ರೆಸ್‌ ಪಕ್ಷದವರನ್ನು ಕೌರವರು ಎಂದು ಟೀಕಿಸಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಗೊತ್ತಿರೋದು ಐಪಿಸಿ 420 ಮಾತ್ರ:ಹಂಪಸಾಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,‘ಹೈ–ಕ ಜಿಲ್ಲೆಗಳ ಅಭಿವೃದ್ಧಿಗೆ ಕಲಂ 371ಜೆ ಜಾರಿಗೆ ಬಂದಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಆ ಬಗ್ಗೆ ಶ್ರೀರಾಮುಲುಗೆ ಏನೂ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.

‘ಜನರು ಶ್ರೀರಾಮುಲು ಕೈಬಿಡಲ್ಲ’
ಹೊಸಪೇಟೆ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ರೋಡ್‌ ಶೋ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಶ್ರೀರಾಮುಲು, ‘ನನ್ನನ್ನು ಸೋಲಿಸಲು 60 ಜನ ಶಾಸಕರು, 10 ಜನ ಸಂಸದರು, 10 ಜನ ಸಚಿವರು ಜಿಲ್ಲೆಗೆ ಬರುತ್ತಿದ್ದಾರೆ. ಆದರೆ ಜಿಲ್ಲೆಯ ಜನರು ಕೈ ಬಿಡುವುದಿಲ್ಲ’ ಎಂದರು.

‘371 ಜೆ ಗಾಗಿ ನಾನು ಹೋರಾಟ ಮಾಡಿಲ್ಲ ನಿಜ. ಆದರೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.