ADVERTISEMENT

Mysuru Dasara| ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2025, 9:33 IST
Last Updated 22 ಸೆಪ್ಟೆಂಬರ್ 2025, 9:33 IST
   

ಬೆಂಗಳೂರು: ಗೋಡಾ ಹೈ - ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ದಸರಾ ಉತ್ಸವ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರನ್ನು ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ ಎಂದರು.

ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು. ನಾವು ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು. ದ್ವೇಷ ಮನುಷ್ಯತ್ವದ ವಿರೋಧಿ. ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು ಎಂದು ಕುಟುಕಿದರು.

ADVERTISEMENT

ಸಂವಿಧಾನದ ಮೌಲ್ಯಗಳಾದ ಸಹಿಷ್ಣುತೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು. ನಮ್ಮ ಸಂವಿಧಾನವು ಜಾತ್ಯತೀತ ಮತ್ತು ಧರ್ಮಾತೀತವಾದುದ್ದು. ಇದನ್ನೇ ಹೈಕೋರ್ಟ್- ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ನುಡಿದರು.

ಯಾರಿಗೆ ಭಾರತೀಯರು ಎನ್ನುವ ಹೆಮ್ಮೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ. ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ಗೊತ್ತಿರಬೇಕು. ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ನಾವು ಮರೆಯಬಾರದು. ಗುಡಿ, ಚರ್ಚ್‌, ಮಸೀದಿಗಳ ಬಿಟ್ಟು ಹೊರ ಬರಬೇಕು. ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರಾಜ್ಯವನ್ನು ಗಟ್ಟಿಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಮತ್ತು ಎಲ್ಲಾ ಪಕ್ಷದ ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ?. ಈ ಗ್ಯಾರಂಟಿಗಳು ನಿಲ್ಲುವುದಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ತಲಾದಾಯ ದೇಶದಲ್ಲೇ ನಂಬರ್ ಒನ್ ಆಗಿದೆ. ಈಗ ಜಿಎಸ್‌ಡಿಪಿಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.