ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ: ಸಚಿವ ಸ್ಥಾನಕ್ಕೆ ಅಹವಾಲು ಸಲ್ಲಿಸಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 8:52 IST
Last Updated 17 ನವೆಂಬರ್ 2025, 8:52 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಕೆ.ಎನ್‌. ರಾಜಣ್ಣ, ಶಾಸಕರಾದ ಎ.ಎಸ್‌. ಪೊನ್ನಣ್ಣ, ಬಿ.ಆರ್‌. ಪಾಟೀಲ, ಪ್ರದೀಪ್ ಈಶ್ವರ್, ಅಶೋಕ್ ಪಟ್ಟಣ್, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಕೆಲವು ಸಚಿವರು, ಶಾಸಕರು ಸೋಮವಾರ ಬೆಳಿಗ್ಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ದೆಹಲಿಗೆ ತೆರಳಿದ ಮುಖ್ಯಮಂತ್ರಿ, ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಬಯಕೆಯ ಅಹವಾಲು ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜೊತೆ ಸುಮಾರು ಒಂದೂವರೆ ಗಂಟೆ  ಚರ್ಚೆ ನಡೆಸಿದ ಕೆ.ಎನ್‌. ರಾಜಣ್ಣ ಅವರೂ ಸಚಿವ ಸ್ಥಾನಕ್ಕೆ‌ ಬೇಡಿಕೆ ಇಟ್ಟಿದ್ದಾರೆಂದು ಗೊತ್ತಾಗಿದೆ.

ADVERTISEMENT

ಮುಖ್ಯಮಂತ್ರಿ ಜೊತೆ ಸಚಿವರಾದ ಎಚ್‌.ಸಿ. ಮಹದೇವಪ್ಪ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಮುಖ್ಯಮಂತ್ರಿ ಜೊತೆ ದೆಹಲಿಗೆ ನಾನೂ ಹೋಗುತ್ತಿದ್ದೇನೆ. ಕಬ್ಬು ಬೆಳೆಗಾರರ ಸಮಸ್ಯೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಲಿದ್ದಾರೆ’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಚಿವ ಸಂಪುಟ ಪುನರ್‌ರಚನೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದೂ ಹೇಳಿದರು.

ನಾಯಕತ್ವಕ್ಕೆ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ನಮ್ಮ ಪಕ್ಷದ ಅಧ್ಯಕ್ಷರು. ರಾಜ್ಯ ರಾಜಕೀಯದಲ್ಲಿನ ಆಗು‌ಹೋಗುಗಳ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿರಬಹುದು’ ಎಂದರು.  

ವಿಜಯಾನಂದ ಕಾಶಪ್ಪನವರ್ ಮಾತನಾಡಿ, ‘ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಹೀಗಾಗಿ ಮುಖ್ಯಮಂತ್ರಿಯವರನ್ನು ಭೇಟಿ‌ ಮಾಡಿದ್ದೇನೆ. ಹೈಕಮಾಂಡ್ ನಾಯಕರನ್ನು ನಾನು ಭೇಟಿ ಮಾಡುವುದಿಲ್ಲ. ನಮ್ಮ ಪಾಲಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರೇ ಹೈಕಮಾಂಡ್’ ಎಂದರು. 

‘ಕಾಂಗ್ರೆಸ್ ಪಕ್ಷಕ್ಕೆ ನಮ್ಮ ತಂದೆ ತಾಯಿ, ನಾವು ಭದ್ರ ಬುನಾದಿಯಂತೆ. ಪಕ್ಕಕ್ಕಾಗಿ ಸೇವೆ ಸಲ್ಲಿಸಿದ್ದೇವೆ. ಅದಕ್ಕಾಗಿ ನಮ್ಮನ್ನು ಪರಿಗಣಿಸಿ ಎಂದು ಕೇಳಿದ್ದೇವೆ. ಮಂತ್ರಿ ಸ್ಥಾನ ಸಿಗುವ ಪೂರ್ಣ ವಿಶ್ವಾಸ ಇದೆ’ ಎಂದರು 

‘ಸಚಿವ ಸ್ಥಾನ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲಾ ಅವರಿಗೂ ಮನವಿ ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.