ADVERTISEMENT

ರಾಜಕೀಯ ನಿಶ್ಶಕ್ತಿ ಎಂಬುದಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:38 IST
Last Updated 19 ಡಿಸೆಂಬರ್ 2025, 15:38 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಸುವರ್ಣ ವಿಧಾನಸೌಧ (ಬೆಳಗಾವಿ): ‘ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ. ಹಾಗಂತ ಅಷ್ಟೆಲ್ಲ ತಲೆ ಕೆಡಿಸಿಕೊಂಡು ರಾಜಕೀಯ ಮಾಡಬೇಕಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಉತ್ತರ ನೀಡಲು ನಿಂತ ಅವರು, ‘ನಿನ್ನೆಯೇ ಉತ್ತರ ನೀಡಬೇಕಿತ್ತು. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸ್ವಲ್ಪ ನಿಶ್ಶಕ್ತನಾಗಿದ್ದೇನೆ’ ಎಂದರು.

ಮಧ್ಯಪ್ರವೇಶಿಸಿದ ಆರ್‌. ಅಶೋಕ, ‘ನಿಮಗೆ ರಾಜಕೀಯ ಶಕ್ತಿ ಬಂದಂತಿದೆ. ಮುಖದಲ್ಲಿ ಕಳೆ ಕಾಣುತ್ತಿದೆ’ ಎಂದು ಹೇಳಿದರು.

ADVERTISEMENT

ಆಗ ಮುಖ್ಯಮಂತ್ರಿ, ‘ರಾಜಕೀಯ ನಿಶ್ಯಕ್ತಿ ಬರಲು ಅವಕಾಶ ಇಲ್ಲವೇ ಇಲ್ಲ. ಶಾರೀರಿಕವಾಗಿ ನಿಶ್ಯಕ್ತಿ ಇರುತ್ತದೆ’ ಎಂದರು.

ಬಿಜೆಪಿಯ ವಿ. ಸುನಿಲ್‌ಕುಮಾರ್, ‘ಇತ್ತೀಚೆಗೆ ನೀವು ರಾಜಕೀಯವಾಗಿ ನಿಶ್ಯಕ್ತ ಆಗಿದ್ದೀರಿ ಎನ್ನುವುದು ಚರ್ಚೆಯಾಗುತ್ತಿದೆ’ ಎಂದರು. ಮತ್ತೆ ಮುಖ್ಯಮಂತ್ರಿ, ‘ರಾಜಕೀಯ ನಿಶ್ಶಕ್ತಿ ಎಂಬುದೇ ಇಲ್ಲ. ಎಂದಿಗೂ ಬರುವುದಿಲ್ಲ’ ಎಂದು ಜೋರಾಗಿಯೇ ಹೇಳಿದರು.

‘ಎಲ್ಲರೂ ಅಭಿನಂದನೆ ಹೇಳುವುದನ್ನು ನೋಡಿದರೆ ಐದು ವರ್ಷ ಪೂರ್ಣಗೊಳಿಸುವುದಿಲ್ಲವೆಂದು ಕಾಣಿಸುತ್ತದೆ’ ಎಂದು ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕಾಲೆಳೆದರು.

‘ನಿಮ್ಮಲ್ಲಿ ಸಂಶಯ ಇರುವುದಕ್ಕೆ ನಿಮ್ಮನ್ನು ಪಾರ್ಟಿಯಿಂದ ಹೊರಹಾಕಿದ್ದಾರೆ. ಅಂತಹ ಸಂಶಯ ಇಟ್ಟುಕೊಳ್ಳಬೇಡಿ’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.