ADVERTISEMENT

ಸಿದ್ದರಾಮಯ್ಯ–ಡಿಕೆಶಿ ಜಗಳದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಲಾಭ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 10:39 IST
Last Updated 28 ಜುಲೈ 2025, 10:39 IST
ಆರ್. ಅಶೋಕ 
ಆರ್. ಅಶೋಕ    

ಮೈಸೂರು: ‘ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್‌ ನಡುವೆ ಒಪ್ಪಂದ ಆಗಿರುವುದು ನೂರಕ್ಕೆ ನೂರು ಸತ್ಯ. ಇವರಿಬ್ಬರ ಜಗಳದಲ್ಲಿ ಮೂರನೇಯವರಿಗೆ ಅಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲಾಭ ಆಗಬಹುದು’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ಕೈತಪ್ಪಿದ ಬಗ್ಗೆ ಹೇಳಿಕೆ ನೀಡಿರುವುದು ಸಿದ್ದರಾಮಯ್ಯ ಮೇಲಿನ ಕೋಪದಿಂದಲೇ ಹೊರತು ಬೇರೆ ಉದ್ದೇಶದಿಂದಲ್ಲ. ಈಗಲಾದರೂ ಆ ಕುರ್ಚಿ ಮೇಲೆ ಕೂರಿಸಲೆಂದೇ ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ಕ್ರಾಂತಿ ಆಗುತ್ತದೆ. ಡಿಕೆಶಿಗೆ ದೇವರೇ ಗತಿ’ ಎಂದರು.

‘ಡಿಕೆಶಿ ವರ ಕೊಡುವ ದೇವರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿಲ್ಲವೇ? ಡಿಕೆಶಿಗೆ ಕಂಟಕ ಇರುವುದು ಜೆಡಿಎಸ್‌ನಿಂದ ಬಂದವರಿಂದಲೇ’ ಎಂದು ಹೇಳಿದರು.

ADVERTISEMENT

‘ಡಿಕೆಶಿ ಮುಖ್ಯಮಂತ್ರಿ ಕುರ್ಚಿ ಎಳೆಯುತ್ತಿದ್ದಾರೆ. ಮತ್ತೊಂದೆಡೆ ಖರ್ಗೆ ಸಿಎಂ ಕುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ತಪ್ಪಿದ ಬಗ್ಗೆ ಖರ್ಗೆಯವರು ಎಸ್‌.ಎಂ. ಕೃಷ್ಣ ಅವರು ಬದುಕಿದ್ದಾಗಲೇ ಹೇಳಬೇಕಿತ್ತು. ಈಗ ಹೇಳುವುದು ಕೃಷ್ಣ ಅವರಿಗೆ ಅವಮಾನ ಮಾಡಿದಂತೆಯೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.