ADVERTISEMENT

ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 18:06 IST
Last Updated 11 ಡಿಸೆಂಬರ್ 2019, 18:06 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೃದಯದ ರಕ್ತನಾಳದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಬುಧವಾರ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ನಗರದ ಮಲ್ಲೇಶ್ವರದಲ್ಲಿರುವ ವಗಸ್ ಸೂಪರ್ ಸ್ಪೆಷಾಲಿಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಗುರುವಾರ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಿದ್ದು, ಆರೋಗ್ಯದ ಸ್ಥಿತಿಯನ್ನು ನೋಡಿಕೊಂಡು ನಂತರ ಮನೆಗೆ ಕಳುಹಿಸಲು ನಿರ್ಧರಿಸಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ಸುಮಾರು 2 ಗಂಟೆ ತಪಾಸಣೆಯನಂತರ ಮನೆಗೆ ವಾಪಸಾಗಿದ್ದರು. ಮಧ್ಯಾಹ್ನದ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ವೇಳೆ ಹೃದಯದ ರಕ್ತನಾಳ ಕಟ್ಟಿಕೊಂಡಿರುವುದು ಗೊತ್ತಾಗಿದ್ದು, ವೈದ್ಯರು ತಕ್ಷಣ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನಡೆಸಿದರು.

ADVERTISEMENT

ಇನ್ನು ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ವೈದ್ಯರ ಸಲಹೆ ಮೇರೆಗೆ ಇಂದು ಸಂಜೆ ಹೃದಯಕ್ಕೆ ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ.‌ ಸದ್ಯ ಆಸ್ಪತ್ರೆಯಲ್ಲಿದ್ದು ನಾಳೆ ಮನೆಗೆ ಹೋಗಿ ಕೆಲವು ದಿನ ವಿಶ್ರಾಂತಿ ಪಡೆಯುತ್ತೇನೆ. ಆರೋಗ್ಯವಾಗಿದ್ದೇನೆ. ಆತಂಕಪಡಬೇಕಾಗಿಲ್ಲ,’ ಎಂದಿದ್ದಾರೆ.

ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಉದ್ವೇಗಕ್ಕೆಒಳಗಾಗಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದು, ರಕ್ತದೊತ್ತಡವೂ ಅಧಿಕವಾಗಿತ್ತು. ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲೂ ಏರುಪೇರಾಗಿತ್ತು. ಮೂತ್ರನಾಳದಲ್ಲೂ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಸಿದ್ದರಾಮಯ್ಯ ಅವರಿಗೆ ಈ ಹಿಂದೆಯೂ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದು, 20 ವರ್ಷಗಳ ಹಿಂದೆ ಆಂಜಿಯೋ ಗ್ರಾಂ ಮಾಡಲಾಗಿತ್ತು. ನಂತರ ಹೃದಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.

2018ರ ವಿಧಾನಸಭೆ ಚುನಾವಣೆ ನಂತರವೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.