ADVERTISEMENT

ದೇವರನ್ನು ನಂಬದ ಭಂಡ ನಾಯಕ ಸಿದ್ದರಾಮಯ್ಯ: ನಳಿನ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 11:35 IST
Last Updated 23 ಆಗಸ್ಟ್ 2022, 11:35 IST
ನಳಿನ್ ಕುಮಾರ್‌ ಕಟೀಲ್‌
ನಳಿನ್ ಕುಮಾರ್‌ ಕಟೀಲ್‌   

ಮಂಗಳೂರು: ‘ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಜವಾದಿ ಚಿಂತನೆಯಿಂದ ಬಂದವರು. ದೇವರು ದಿಂಡರನ್ನು, ರಾಷ್ಟ್ರವನ್ನು ನಂಬದ ಅವರೊಬ್ಬ ನಾಸ್ತಿಕವಾದಿ ಕಾಂಗ್ರೆಸ್ಸಿಗ. ಸಾವರ್ಕರ್‌ ಅವರಂತಹವರ ಹೋರಾಟ ಮತ್ತು ರಾಷ್ಟ್ರಾಭಿಮಾನವನ್ನೇ ಪ್ರಶ್ನೆ ಮಾಡಿದ ಒಬ್ಬ ಭಂಡ ನಾಯಕ. ಅಂತಹ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ಏನು ತಪ್ಪು ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಚಿಂತನೆ ಹರಿಯಬಿಟ್ಟಿದ್ದಾರೆ. ಪ್ರಶ್ನೆ ಅದಲ್ಲ. ಇದು ಭಾವನೆ ಮತ್ತು ನಂಬಿಕೆಯ ವಿಚಾರ. ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಅವರಿಂದ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಚರ್ಚೆ ಆರಂಭಿಸಿದ್ದಾರೆ. ಅವರು ಅಧಿಕಾರ ಇಲ್ಲದೇ ವಿಲ ವಿಲ ಒದ್ದಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ತೋರಿಸಲು ಈ ರೀತಿ ಮಾನಸಿಕತೆ ಪ್ರದರ್ಶಿಸುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಇದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ, ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರಾಗುತ್ತಾರಾ ಎಂಬ ಬಗ್ಗೆ ಚರ್ಚೆ ನಡೆಯುವಾಗ, ಅವರನ್ನೆಲ್ಲ ಮೀರಿ ನಾನಿದ್ದೇನೆ ಎಂದು ತೋರಿಸುವುದಕ್ಕೆ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡುತ್ತಾರೆ. ಹಾಗಾಗಿ ಇಂತಹ ವಿಚಾರಗಳು ಚರ್ಚೆಗೆ ಬರುತ್ತವೆ’ ಎಂದರು.

ADVERTISEMENT

‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲದಿದ್ದರೆ, ಅವರಿಗೆ ಏಕೆ ಎರಡು ಬಾರಿ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ಕಾಂಗ್ರೆಸ್‌ನ ಯಾವ ನಾಯಕ ಅಂಡಮಾನ್‌ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದಾರೆ. ಇಂದಿರಾ ಗಾಂಧಿ ಅವರು ಸಾವರ್ಕರ್‌ ಕುರಿತ ಅಂಚೆ ಚೀಟಿಯನ್ನು ಏಕೆ ಬಿಡುಗಡೆ ಮಾಡಿದರು. ಕಾಂಗ್ರೆಸ್‌ನ ಸರ್ವೊಚ್ಚ ನಾಯಕಿಯಾದ ಇಂದಿರಾ ಗಾಂಧಿ ಅವರ ಮಾತನ್ನು ಸಿದ್ದರಾಮಯ್ಯ ಅವರು ಅಲ್ಲಗಳೆಯುತ್ತಾರಾ’ ಎಂದು ನಳಿನ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.