ADVERTISEMENT

ನೇಮಕಾತಿಗಳಲ್ಲಿ ಅಕ್ರಮ ತಡೆ ಮಸೂದೆಗೆ ಸಂಪುಟ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 16:18 IST
Last Updated 17 ನವೆಂಬರ್ 2023, 16:18 IST
   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ, ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ರೂಪಿಸಿರುವ ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ) ಮಸೂದೆ-2023ಕ್ಕೆ ಗುರುವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಡಿಸೆಂಬರ್‌ 4ರಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆಯುವುದಕ್ಕೂ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರದ ಮೂಲಕ ಅಕ್ರಮ ನೇಮಕಾತಿ ಸೇರಿದಂತೆ ಎಲ್ಲ ಬಗೆಯ ಅಕ್ರಮಗಳಿಗೂ ಕಡಿವಾಣ ಹಾಕುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳ ತಮ್ಮ ಅಧಿಕೃತ ಖಾತೆಗಳಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌, ಸಹಾಯಕ ಪ್ರಾಧ್ಯಾಪಕರು, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿದ್ದವು. ವರ್ಷಾನುಗಟ್ಟಲೆ ತಯಾರಿ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗ ವಂಚಿತರಾಗಿದ್ದರು’ ಎಂದಿದ್ದಾರೆ.

ADVERTISEMENT

‘ಇಂತಹ ಅಕ್ರಮ, ಅವ್ಯವಹಾರಗಳನ್ನು ತಡೆಗಟ್ಟಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಅಳವಡಿಸಲು ಈ ಮಸೂದೆಯನ್ನು ರೂಪಿಸಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದಕ್ಕೆ ನಮ್ಮ ಆದ್ಯತೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.