ಬೆಂಗಳೂರು: ‘ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿದೆ. ಈ ವಿಚಾರವನ್ನು ಮನೆ ಬಾಗಿಲಿಗೆ ತಲುಪಿಸುವ ಜೊತೆಗೆ ಫಲಾನುಭವಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಸಚಿವರು ತಮ್ಮ ಮಾತಿಗೆ ಕಿಮ್ಮತ್ತು ನೀಡುವುದಿಲ್ಲ, ಅಭಿವೃದ್ಧಿ ಕೆಲಸಗಳಿಗೆ ನಿರೀಕ್ಷೆಯಂತೆ ಅನುದಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರ ಮುನಿಸು ತಣಿಸಲು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಮತ್ತು ಶಾಸಕರ ಜೊತೆ ಮಂಗಳವಾರದಿಂದ ಸಿದ್ದರಾಮಯ್ಯ ಅವರು ಸಭೆ ಆರಂಭಿಸಿದ್ದಾರೆ.
ಮೊದಲ ದಿನವಾದ ಮಂಗಳವಾರ ಅವರು ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಮತ್ತು ಶಾಸಕರ ಜೊತೆ ಸಭೆ ನಡೆಸಿದರು.
‘ಎಲ್ಲ ಕೆಡಿಪಿ ಸಭೆಗಳಲ್ಲಿ ಸಚಿವರು, ಶಾಸಕರು ಅರ್ಥಪೂರ್ಣವಾಗಿ ಭಾಗವಹಿಸಬೇಕು. ಜನರ ಸಮಸ್ಯೆಗಳು, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆಗಳು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನ ಧೋರಣೆ ಬಗ್ಗೆ ಈ ಸಭೆಗಳಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿಗತಿ, ಕೃಷಿ ಚಟುವಟಿಕೆ ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗದಿ ಮಾಡಬೇಕು’ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.
ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನ, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿಗತಿ, ಶಾಸಕರ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಪ್ರಮುಖವಾಗಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳಿಗೆ ಪ್ರಸ್ತಾವ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡು ಸಲಹೆ, ಸೂಚನೆಗಳನ್ನು ನೀಡಿದರು. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜಿಲ್ಲೆಯ ಆರ್ಥಿಕತೆ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಅವರು ಶಾಸಕರ ಗಮನ ಸೆಳೆದರು.
ಜಿಲ್ಲೆಗಳ ಸಮಸ್ಯೆಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ಶಾಸಕರು ಪಟ್ಟಿ ಕೊಟ್ಟಿದ್ದಾರೆ. ಅದಕ್ಕೆ ಸ್ಪಂದಿಸುವ ಭರವಸೆಯನ್ನು ಅವರು ನೀಡಿದ್ದಾರೆಕೆ. ವೆಂಕಟೇಶ್ ಪಶು ಸಂಗೋಪನಾ ಸಚಿವ
ಜಿಲ್ಲೆಯಲ್ಲಿನ ಸಣ್ಣಪುಟ್ಟ ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ನಾವೆಲ್ಲ ಶಾಸಕರು ಒಂದಾಗಿದ್ದೇವೆ. ಅನುದಾನ ಮತ್ತು ಒಗ್ಗಟ್ಟಿನ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ಧೇವೆಜಿ. ಪರಮೇಶ್ವರ ತುಮಕೂರು ಉಸ್ತುವಾರಿ ಸಚಿವ
ಜಿಲ್ಲೆಯಲ್ಲಿ ಸಮಸ್ಯೆ ಏನೂ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲರೂ ಸಾಮರಸ್ಯದಿಂದ ಇದ್ದೇವೆ. ಮೈಸೂರಿಗೆ ಮುಖ್ಯಮಂತ್ರಿ ಹೆಚ್ಚಿನ ಅನುದಾನ ಕೊಟ್ಟಿದ್ದಾರೆಎಚ್.ಸಿ. ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
- ಪ್ರತ್ಯೇಕ ಸಭೆ ನಡೆಸಿದ ಡಿಕೆಶಿ
ಸಚಿವರು ಶಾಸಕರ ಜೊತೆ ಮುಖ್ಯಮಂತ್ರಿ ನಡೆಸುತ್ತಿರುವ ಸಭೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡದೇ ಇರುವುದು ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಭೆ ನಡೆಸಿದ ವೇಳೆಯೇ ಶಿವಕುಮಾರ್ ಅವರುಬೆಂಗಳೂರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಪ್ರಮುಖರ ಜತೆ ವಿಧಾನಸೌಧದಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಶಾಸಕರ ಜತೆಗಿನ ಸಭೆಗೆ ಆಮಂತ್ರಣ ಇಲ್ಲದಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ‘ಅವರು (ಸಿದ್ದರಾಮಯ್ಯ) ತಮ್ಮ ಅಧಿಕಾರ ಬಳಸಿಕೊಂಡು ಶಾಸಕರ ಸಭೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ. ಈ ವಿಚಾರದಲ್ಲಿ ನನಗೆ ಏನು ಕಷ್ಟವಾಗದಿದ್ದರೂ ನಿಮಗೆ (ಮಾಧ್ಯಮದವರಿಗೆ) ಏನು ಕಷ್ಟ’ ಎಂದು ಪ್ರಶ್ನಿಸಿದರು.
‘ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಶಾಸಕರನ್ನು ಭೇಟಿ ಮಾಡಿದ ಬಳಿಕ ಅನೇಕ ವಿಚಾರಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದಾರೆ. ಶಾಸಕರ ಅಹವಾಲು ಆಲಿಸಲು ಅವರು ಸಭೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನನಗೆ ಯಾವುದೇ ಆಕ್ಷೇಪ ಇಲ್ಲ’ ಎಂದರು. ಪ್ರತ್ಯೇಕ ಸಭೆ ನಡೆಸಿದ ಬಗ್ಗೆ ಮಾತನಾಡಿದ ಅವರು ‘ಬೆಂಗಳೂರಿನ ಅಭಿವೃದ್ದಿಗೆ ನಾವು ಪ್ರತ್ಯೇಕ ಕಾರ್ಯಸೂಚಿ ಹೊಂದಿದ್ದೇವೆ. ಬೆಂಗಳೂರಿನ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಹೀಗಾಗಿ ನಾನು ಕೂಡಾ ಕೆಲವು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.