ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರದ ರಾಯಭಾರಿ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಹೊಸ ಹೊಸ ಜಾತಿಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈವರೆಗೆ ಅಧಿಕೃತ ಜಾತಿ ಪಟ್ಟಿಯಲ್ಲಿ ಇಲ್ಲದ ಜಾತಿಗಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಜಾತಿ ಸಮೀಕ್ಷೆ ರದ್ದಾಗುವ ಸಾಧ್ಯತೆ ಹೆಚ್ಚು’ ಎಂದು ಹೇಳಿದರು.
‘ಹಿಂದೂಗಳಲ್ಲಿ ತಪ್ಪು ಇದೆ ಎಂದಿದ್ದಾರೆ. ಹಾಗಿದ್ದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ತಪ್ಪು– ತಾರತಮ್ಯಗಳು ಇಲ್ಲವೆ? ಅವುಗಳ ಕುರಿತೂ ಮಾತನಾಡಲಿ. ಇವರಿಗೆ ಹಿಂದೂಗಳ ಮತ ಮಾತ್ರ ಬೇಕು. ಗೆದ್ದ ನಂತರ ಹಿಂದೂಗಳನ್ನು ತುಳಿಯುವ ಕೆಲಸ ಮಾಡುತ್ತಾರೆ’ ಎಂದರು.
‘ದಸರಾ ಹಬ್ಬವನ್ನು ನಾಡ ಹಬ್ಬ, ಹಿಂದೂಗಳ ಹಬ್ಬ ಎನ್ನುತ್ತಾರೆ. ಅದೇ ರೀತಿ ಮುಸ್ಲಿಂ ಹಬ್ಬಗಳನ್ನು ಕೂಡ ನಾಡ ಹಬ್ಬ ಎಂದು ಮಾಡಲಿ. ಮುಸ್ಲಿಂ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟನೆ ಮಾಡಿಸಲಿ’ ಎಂದು ಅವರು ವ್ಯಂಗ್ಯವಾಡಿದರು.
ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದು ಎಂಬಂತೆ ನಿಯಮ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದಾಗಿಯೇ ಹಿಂದೂ–ಮುಸ್ಲಿಮರ ನಡುವೆ ಒಡಕು ಮೂಡಿದೆ ಎಂದು ಅಶೋಕ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.