ADVERTISEMENT

18 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 21:46 IST
Last Updated 29 ಏಪ್ರಿಲ್ 2021, 21:46 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಬಾಣಂತಿಯರು ಮತ್ತು ಮಕ್ಕಳನ್ನು ಹೊರತುಪಡಿಸಿ 18 ವರ್ಷ ದಾಟಿದ ಎಲ್ಲರಿಗೂ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು. ರಾಜ್ಯಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ಪೂರೈಸುವುದು ಕೇಂದ್ರದ ಜವಾಬ್ದಾರಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘‍ರಾಜ್ಯದಲ್ಲಿ ಐಸಿಯು ಬೆಡ್‌ಗಳ ತೀವ್ರ ಕೊರತೆ ಇದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಹಾಸಿಗೆಗಳಿವೆ. ಆದರೆ, 65 ಹಾಸಿಗೆಗಳಿಗೆ ಮಾತ್ರ ಐಸಿಯು ಸೌಲಭ್ಯವಿದೆ. ಕನಿಷ್ಠ 250 ಬೆಡ್‌ಗಳಿಗಾದರೂ ಐಸಿಯು ಸೌಲಭ್ಯ ಒದಗಿಸಬೇಕು. ಆಸ್ಪತ್ರೆಗೆ 100 ಮಂದಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ನಿವೃತ್ತ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನೂ ಬಳಸಿಕೊಳ್ಳುವುದು ಸೂಕ್ತ’ ಎಂದರು.

ಪ್ಯಾಕೇಜ್ ಘೋಷಿಸಿ: '14 ದಿನಗಳ ಕರ್ಫ್ಯೂನಿಂದ ತೊಂದರೆಗೆ ಒಳಗಾಗುವ ಕೂಲಿ ಕಾರ್ಮಿಕರು, ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೊರೊನಾ ಸಂದರ್ಭದಲ್ಲಿ ಸಿದ್ದರಾಮಯ್ಯ ಟೀಕೆ ಮಾಡುತ್ತಾರೆ ಎಂದು ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಸತ್ಯ ಹೇಳಿದರೆ ಟೀಕೆ ಎನ್ನುವುದೇಕೆ. ಶವಸಂಸ್ಕಾರಕ್ಕೂ ಜನ ಪರದಾಡುತ್ತಿರುವುದು ಸತ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.