ADVERTISEMENT

ಸಿದ್ದರಾಮಯ್ಯ ಪರಾವಲಂಬಿ ಸಸ್ಯ: ಎಚ್‌.ಡಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 19:23 IST
Last Updated 26 ಸೆಪ್ಟೆಂಬರ್ 2021, 19:23 IST
   

ಬೆಂಗಳೂರು:‘ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಜೆಡಿಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, 'ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು ಎಂಬುದನ್ನು ಜನ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ. ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದ ಸಿದ್ದರಾಮಯ್ಯ, ಈಗ ಅದೇ ಬಲದಿಂದ ಕಾಂಗ್ರೆಸ್ ಪಕ್ಷವನ್ನೇ ನುಂಗುತ್ತಿದ್ದಾರೆ. ಆ ಪಕ್ಷದ ದಿಗ್ಗಜ ನಾಯಕರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

'ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು’ ನನ್ನನ್ನು ಮುಖ್ಯಮಂತ್ರಿ ಮಾಡಿ ಕೊನೆಗೆ ಕೈಕೊಟ್ಟು ಆ ಸರ್ಕಾರದ ಪತನಕ್ಕೆ ʼಕಾರಣಪುರುಷರುʼ ಯಾರು? ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದಿದ್ದಾರೆ.

‘ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿ, ಅವರಿಗೆ ಕೈಕೊಟ್ಟವರು ಯಾರು ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರೇ ಸುಮ್ಮನೆ ನಮ್ಮನ್ನು ಕೆಣಕಬೇಡಿ. ಜೆಡಿಎಸ್ ಚಿಕ್ಕ ಪಕ್ಷವಿರಬಹುದು, ಅದರ ಶಕ್ತಿಯನ್ನು ಕಡೆಗಣಿಸಬೇಡಿ. ಕರ್ನಾಟಕ ರಾಜಕಾರಣದಲ್ಲಿ ಪರಾವಲಂಬಿ ಸಸ್ಯ ನೀವು. ಪಕ್ಷಗಳನ್ನು ಒಡೆಯುವ ನಿಮ್ಮ ‘ಸಿದ್ದಕಲೆʼ ರಾಜ್ಯಕ್ಕೆ ಹೊಸತೇನಲ್ಲ‘ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.