ADVERTISEMENT

ಮೊಟ್ಟೆ ಎಸೆದವನನ್ನು ಅಪ್ಪಚ್ಚು ರಂಜನ್‌ ಠಾಣೆಯಿಂದ ಬಿಡಿಸಿದ್ದೇಕೆ?: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2022, 11:40 IST
Last Updated 20 ಆಗಸ್ಟ್ 2022, 11:40 IST
   

ಬೆಂಗಳೂರು: ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸುವುದಾಗಿ ಆರೋಪಿಗೆ ಷರತ್ತು ಹಾಕಿ ಬಿಡುಗಡೆಗೊಳಿಸಿದ್ದೀರಾ? ಎಂದು ಪ್ರಶ್ನಿಸಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಆಪರೇಷನ್ ಕಮಲ' ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ 'ಆಪರೇಷನ್ ಕಮಲ'ವನ್ನೂ ಬಿಜೆಪಿ ನಡೆಸುತ್ತದೆ ಎಂದು‌ ಮಡಿಕೇರಿಯಲ್ಲಿ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ? ಎಂದು ಬಿಜೆಪಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಆ.18ರಂದು ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆಯನ್ನು ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸಂಪತ್‌ ತಾನು ಕಾಂಗ್ರೆಸ್‌ ಕಾರ್ಯಕರ್ತನೆಂದು ಹೇಳಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.