ADVERTISEMENT

ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ, ಇನ್ನು ಹೈಕಮಾಂಡ್‌ ತೀರ್ಮಾನ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:34 IST
Last Updated 6 ಜನವರಿ 2026, 7:34 IST
<div class="paragraphs"><p>ಸಿದ್ದರಾಮಯ್ಯ </p></div>

ಸಿದ್ದರಾಮಯ್ಯ

   

ಮೈಸೂರು: ‘ರಾಜಕಾರಣ ತೃಪ್ತಿಕೊಟ್ಟಿದೆ. ಜನರಿಗೆ ಕೆಲಸ ಮಾಡುವುದೇ ಖುಷಿ. ಪೂರ್ಣಾವಧಿ ಮುಖ್ಯಮಂತ್ರಿ ಆಗುವ ವಿಶ್ವಾಸವಿದ್ದು, ಎಲ್ಲವೂ ಹೈಕಮಾಂಡ್‌ ತೀರ್ಮಾನವನ್ನು ಅವಲಂಬಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಶಾರದಾದೇವಿನಗರ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಡವರು, ದಲಿತರು, ಹಿಂದುಳಿದವರಿಗೆ ನ್ಯಾಯ ಕೊಡಿಸುವುದೇ ರಾಜಕಾರಣ. ಸುಧೀರ್ಘ ಅವಧಿಯ ಮುಖ್ಯಮಂತ್ರಿಯೆಂಬ ದಾಖಲೆ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ಡಿ.ದೇವರಾಜ ಅರಸು ಮತ್ತು ನಾನು, ಇಬ್ಬರೂ ಮೈಸೂರಿನವರಾದರೂ ನಮ್ಮ ಕಾಲಘಟ್ಟ ಬೇರೆ’ ಎಂದರು.

ADVERTISEMENT

‘ದೇವರಾಜ ಅರಸು 1972ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ಜನರ ಆಶೀರ್ವಾದದಿಂದ ನಾನು 2013–18, 2023ರಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ. ಮುಂದೆ ಹೈಕಮಾಂಡ್‌ ಏನು ತೀರ್ಮಾನಿಸುತ್ತದೊ ನೋಡಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ಅಸಮಾನತೆ ಇನ್ನೂ ಇದ್ದು, ಅದು ಹೋಗುವವರೆಗೂ, ಜನರಿಗೆ ಸಾಮಾಜಿಕ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತಲೇ ಇರಬೇಕು. ಜನರ ಕೆಲಸ ಮಾಡುತ್ತಲೇ ಇರುವೆ’ ಎಂದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ವಯನಾಡ್‌ನಿಂದ ಬೆಂಗಳೂರು– ದೆಹಲಿಗೆ ಹೋಗುವರಿದ್ದರು. ಮೈಸೂರಿಗೆ ಬಂದಿದ್ದರಿಂದ, ಹಾಗೆಯೇ ಭೇಟಿ ಮಾಡಿದ್ದೇವಷ್ಟೇ ಬೇರೇನಿಲ್ಲ. ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲು ಹೈಕಮಾಂಡ್‌ ಕರೆದಾಗ ಹೋಗುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾಟಿ ಕೋಳಿ ಪಲಾವ್, ಲಾಡು ಹಂಚಿ ಸಂಭ್ರಮ:

ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದದ್ದರಿಂದ ನಿವಾಸದ ಸುತ್ತಲೂ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಅಹಿಂದ ಮೈಸೂರು ಸಂಘಟನೆಗಳ ಸದಸ್ಯರು, ಮುಖ್ಯಮಂತ್ರಿ ಅವರಿಗೆ ಅಹವಾಲು ಸಲ್ಲಿಸಲು ಬಂದಿದ್ದ ಜನರಿಗೆ ‘ನಾಟಿ ಕೋಳಿ ಪಲಾವ್’ ಹಾಗೂ ಲಾಡು ವಿತರಿಸಿ ಸಂಭ್ರಮಿಸಿದರು. ರಸ್ತೆಗಳಲ್ಲಿ ಮುಖಂಡರು, ಅಭಿಮಾನಿಗಳು ಅಭಿನಂದನೆಗಳ ಫ್ಲೆಕ್ಸ್‌ಗಳನ್ನು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.