ADVERTISEMENT

Reservation | ಮೀಸಲಾತಿ ಶೇ 75ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:58 IST
Last Updated 19 ನವೆಂಬರ್ 2025, 15:58 IST
'ಎಲ್.ಜಿ. ಹಾವನೂರ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ರವಿವರ್ಮ ಕುಮಾರ್, ಶಿವರಾಜ ಎಸ್‌. ತಂಗಡಗಿ, ಎಚ್.ಎಂ ರೇವಣ್ಣ, ಸಿದ್ದರಾಮಯ್ಯ, ಬೈರತಿ ಸುರೇಶ್, ಕೆ.ಎಂ. ರಾಮಚಂದ್ರಪ್ಪ ಅವರು ಸಂವಿಧಾನದ ಪೀಠಿಕೆ ವಾಚಿಸಿದರು -ಪ್ರಜಾವಾಣಿ ಚಿತ್ರ
'ಎಲ್.ಜಿ. ಹಾವನೂರ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ರವಿವರ್ಮ ಕುಮಾರ್, ಶಿವರಾಜ ಎಸ್‌. ತಂಗಡಗಿ, ಎಚ್.ಎಂ ರೇವಣ್ಣ, ಸಿದ್ದರಾಮಯ್ಯ, ಬೈರತಿ ಸುರೇಶ್, ಕೆ.ಎಂ. ರಾಮಚಂದ್ರಪ್ಪ ಅವರು ಸಂವಿಧಾನದ ಪೀಠಿಕೆ ವಾಚಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೀಸಲಾತಿ ಶೇಕಡ 50 ಮೀರಬಾರದು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿದೆ. ಕೇಂದ್ರ ಸರ್ಕಾರವು ಈ ಮಿತಿಯನ್ನು ದಾಟಿ ಶೇ 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ನೀಡಿದೆ. ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುವಂತಾಗಲು ಮೀಸಲಾತಿ ಪ್ರಮಾಣವನ್ನು ಶೇ 70–75ರಷ್ಟಕ್ಕೆ ಹೆಚ್ಚಿಸಬೇಕು ಎಂದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಎಲ್.ಜಿ. ಹಾವನೂರು ವರದಿಯ ಸುವರ್ಣ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಾತಿವಾರು ಸಮೀಕ್ಷೆ ಏನಾಯಿತು ಎಂದು ರಾಹುಲ್‌ ಗಾಂಧಿ ಇತ್ತೀಚೆಗೆ ನನ್ನನ್ನು ಪ್ರಶ್ನಿಸಿದ್ದರು. ಈ ತಿಂಗಳ ಒಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದೇನೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮಧುಸೂದನ್‌ ನಾಯ್ಕ್ ಆಯೋಗ ಸಲ್ಲಿಸಿದರೆ ಅದನ್ನು ಅಂಗೀಕರಿಸಿ ಜಾರಿ ಮಾಡಿಯೇ ಮಾಡ್ತೇವೆ’ ಎಂದು ತಿಳಿಸಿದರು.

ADVERTISEMENT

‘ರಾಹುಲ್‌ ಗಾಂಧಿಯ ಒತ್ತಾಯದ ಮೇರೆಗೆ ಈ ಬಾರಿ ಕೇಂದ್ರ ಸರ್ಕಾರವು ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಸೇರಿಸಿದೆ. ಆದರೆ, ಅದರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಗಣತಿ ಇಲ್ಲ’ ಎಂದು ಟೀಕಿಸಿದರು.

‘ಹಳ್ಳಿಯಲ್ಲಿ ಬೇಡ ಸಮುದಾಯದಲ್ಲಿ ಜನಿಸಿದ ಹಾವನೂರು ಅವರು ವಿದ್ಯಾರ್ಥಿಯಾಗಿದ್ದಾಗಲೇ ಪ್ರತಿಭಟನಾ ಗುಣವನ್ನು ಹೊಂದಿದ್ದರು. ಹಂತ ಹಂತವಾಗಿ ಬೆಳೆದು ತಮ್ಮ ಸಾಮರ್ಥ್ಯ ತೋರಿಸಿದ್ದರು. ಬೇಡ ಸಮುದಾಯದ ಮೊದಲ ವಕೀಲರು ಅವರು. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ. ಅದಕ್ಕೆ ಹಿಂದಿನ ಜನ್ಮ ಕರ್ಮ ಅಥವಾ ಹಣೆಬರಹ ಕಾರಣವಲ್ಲ’ ಎಂದರು.

ವಕೀಲ ರವಿವರ್ಮಕುಮಾರ್ ಮಾತನಾಡಿ, ‘ಎಲ್‌.ಜಿ. ಹಾವನೂರು ಅವರ ಹೆಸರನ್ನು ಕಾನೂನು ವಿಶ್ವವಿದ್ಯಾಲಯಕ್ಕೆ ಇಡಬೇಕು. ಪ್ರತಿ ಜಿಲ್ಲೆಯಲ್ಲಿ ಹಾವನೂರು ಹೆಸರಲ್ಲಿ ಭವನ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ, ‘ಕಾಂತರಾಜು ಆಯೋಗದ ವರದಿಯನ್ನು ಜಾರಿಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿದ್ದರೂ ಪ್ರಬಲ ಜಾತಿಯವರ ಕುತಂತ್ರದಿಂದ ಜಾರಿಯಾಗಿಲ್ಲ. ಈಗ ನಡೆಸುತ್ತಿರುವ ಸಮೀಕ್ಷೆಯನ್ನೂ ಪ್ರಬಲ ಜಾತಿಯ ಜನರು ವಿರೋಧಿಸುತ್ತಿದ್ದಾರೆ’ ಎಂದರು.

ಹಿಂದುಳಿದ ವರ್ಗಗಳ ಸಚಿವ ಶಿವರಾಜ ಎಸ್‌. ತಂಗಡಗಿ ಮಾತನಾಡಿ, ‘ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ್ದ ಹಾವನೂರು ಅವರ ಪ್ರತಿಮೆಯನ್ನು ದೇವರಾಜ ಅರಸು ಭವನದಲ್ಲಿ ಸ್ಥಾಪಿಸಲಾಗಿದೆ’ ಎಂದರು.

ಸಾಯುವವರು ಹಿಂದುಳಿದವರು

‘ದಕ್ಷಿಣ ಕನ್ನಡದಲ್ಲಿ ಕೋಮುಗಲಭೆಗಳಲ್ಲಿ ಸಾಯುವವರು ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು. ಬಿಜೆಪಿ ಆರ್‌ಎಸ್‌ಎಸ್‌ ನಮ್ಮ ಶತ್ರು ಎಂದು ಗೊತ್ತಿದ್ದರೂ ಮತ್ತದೇ ಸಿದ್ಧಾಂತಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ‘ತಮ್ಮ ಸಮುದಾಯದ ಏಳಿಗೆ ಬಯಸದ ಬಿಜೆಪಿ ಆರ್‌ಎಸ್‌ಎಸ್‌ ಎಬಿವಿಪಿಯನ್ನು ಹಿಂದುಳಿದವರು ದಲಿತರು ಸೇರುತ್ತಿದ್ದಾರೆ. ಇನ್ನು ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿ ಆರ್‌ಎಸ್‌ಎಸ್‌ ಸೇರಿ ಮೂಲ ಆರ್‌ಎಸ್‌ಎಸ್‌ನವರಿಗಿಂತಲೂ ಅ‍ಪಾಯಕಾರಿಯಾಗಿ ಮಾತನಾಡುತ್ತಾರೆ. ತಾವೇ ಹೆಡಗೇವಾರ್‌ ಎಂಬಂತೆ ಆಡುತ್ತಾರೆ’ ಎಂದು ವ್ಯಂಗ್ಯವಾಡಿದರು. ಶೂದ್ರರಿಗೆ ಮನುಸ್ಮೃತಿ ಯಾವ ಸ್ಥಾನವನ್ನು ನೀಡಿದೆ ಎಂಬುದನ್ನು ಅರ್ಥ ಮಾಡಿಸಲು ಸಿದ್ದರಾಮಯ್ಯ ಅವರು ಮನುಸ್ಮೃತಿಯ ಅಧ್ಯಾಯ 2 ಅಧ್ಯಾಯ 8ರ ಕೆಲವು ಸಾಲುಗಳನ್ನು ಓದಿದರು.

ಹಾವನೂರಿಗೂ ಪಂಕ್ತಿಭೇದ

‘ವಸತಿನಿಲಯದಲ್ಲಿದ್ದುಕೊಂಡು ಪದವಿ ಓದುತ್ತಿದ್ದ ಎಲ್‌.ಜಿ. ಹಾವನೂರು ಅವರಿಗೂ ಪಂಕ್ತಿಭೇದದ ಬಿಸಿ ತಟ್ಟಿತ್ತು’ ಎಂದು ರವಿವರ್ಮ ಕುಮಾರ್‌ ಹೇಳಿದರು. ‘ವಸತಿನಿಲಯದಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯತರು ಊಟ ಮಾಡಿ ಹೋದ ಮೇಲಷ್ಟೇ ಬೇಡ ಸಮುದಾಯದ ಹಾವನೂರು ಸಹಿತ ಉಳಿದವರು ಊಟ ಮಾಡಬೇಕಿತ್ತು. ಒಂದು ದಿನ ಹಸಿವಾಯಿತು ಎಂದು ಬೇಗನೇ ಊಟ ಮಾಡಲು ಮುಂದಾದಾಗ ವಾರ್ಡನ್ ನಿರಾಕರಿಸಿದರು. ಆದರೂ ಅಡುಗೆ ಭಟ್ಟರಿಗೆ ಹೇಳಿ ಊಟ ಬಡಿಸಿಕೊಂಡು ಮಾಡಿದ್ದರು. ಇದು ಗೊತ್ತಾಗಿ ಪ್ರಬಲ ಜಾತಿಯ ವಿದ್ಯಾರ್ಥಿಗಳೆಲ್ಲ ಬಂದಿದ್ದರು. ಪೈಲ್ವಾನ್‌ ಆಗಿದ್ದ ಹಾವನೂರು ಅವರನ್ನು ಮುಟ್ಟಲು ಧೈರ್ಯ ಸಾಲದೇ ಅಡುಗೆ ಭಟ್ಟರಿಗೆ ಹೊಡೆಯತೊಡಗಿದ್ದರು. ಆಗ ಹಾವನೂರು ಅವರು ಅಡುಗೆ ಭಟ್ಟರ ಸಹಾಯಕ್ಕೆ ಬಂದು ಆ ವಿದ್ಯಾರ್ಥಿಗಳನ್ನೇ ಹೊಡೆದು ಓಡಿಸಿದ್ದರು. ಪರಿಣಾಮವಾಗಿ ವಸತಿನಿಲಯದಿಂದಲೂ ಕಾಲೇಜಿನಿಂದಲೂ ಹಾವನೂರು ಅವರನ್ನು ಡಿಬಾರ್ ಮಾಡಲಾಯಿತು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.