ADVERTISEMENT

ಜನರ ಹಾದಿ ತಪ್ಪಿಸಲು ಸುಳ್ಳು ಜಾಹೀರಾತು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 19:51 IST
Last Updated 8 ಜನವರಿ 2022, 19:51 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಮೇಕೆದಾಟು ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳ ವಿಷಯದಲ್ಲಿ ಎರಡೂವರೆ ವರ್ಷದಿಂದ ಏನನ್ನೂ ಮಾಡದ ಬಿಜೆಪಿ ಸರ್ಕಾರ, ಸುಳ್ಳು ಜಾಹೀರಾತು ನೀಡಿ ಜನರನ್ನು ಹಾದಿ ತಪ್ಪಿಸುವ ಹುನ್ನಾರ ನಡೆಸಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಯೋಜನೆಯ ವಿಷಯದಲ್ಲಿ ಬಿಜೆಪಿಯಿಂದ ವಿಳಂಬ ದ್ರೋಹ ಆಗಿದೆ. ಯಾವುದೇ ಅಡೆತಡೆ ಇಲ್ಲದಿದ್ದರೂ ಕೆಲಸವನ್ನೇ ಆರಂಭಿಸಿಲ್ಲ. ಕೇಂದ್ರಕ್ಕೆ ಒತ್ತಾಯ ಮಾಡಿಯೇ ಇಲ್ಲ. ಈಗ ಅದಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ದೂರಿದರು.

‘ನಾವು ಪಾದಯಾತ್ರೆ ಮಾಡಿಯೇಮಾಡುತ್ತೇವೆ. ನಿಷೇಧಾಜ್ಞೆ ವಿಧಿಸಿದರೆ ಐದೈದು ಜನ ಹೋಗಿ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಿಲ್ಲ.ರಾಮನಗರದಲ್ಲಿ ಮಾತ್ರ ನಿಷೇಧಾಜ್ಞೆ ಹಾಕಿದ್ದಾರೆ ಅಂದರೆ ಅರ್ಥ ಏನು? ಇದು ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರವಲ್ಲವೇ’ ಎಂದು ಕಿಡಿಕಾರಿದರು.

ADVERTISEMENT

‘2008ರಿಂದ ಗೋವಿಂದ ಕಾರಜೋಳ ಮಂತ್ರಿ ಆಗಿದ್ದರು. ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಏನು ಮಾಡಿದ್ದರು’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನವರಂತೆ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಹಟಕ್ಕೆ ಬಿದ್ದು ಯಾತ್ರೆ ಮಾಡುವುದಿಲ್ಲ’ ಎಂಬ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ಸುಮ್ಮನೆ ಯಾಕೆ ಮಾತನಾಡಬೇಕು. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.