
ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೊಡಾಗ್ ವಿವಾದದ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. 'ಕಾಪಿ-ಪೇಸ್ಟ್' ಎಂದು ಜರಿದಿದ್ದಾರೆ.
ಬುಧವಾರ ಎಕ್ಸ್ ಪೋಸ್ಟ್‌ನಲ್ಲಿ,‘ಮೊದಲು ಯುಪಿಎ ಯೋಜನೆಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲು ಮಾಡಿದರು. ಬಳಿಕ, ಅವುಗಳನ್ನು ತಮ್ಮದೇ ಆದ ಭವ್ಯ ದೃಷ್ಟಿಕೋನವೆಂದು ಮರುನಾಮಕರಣ ಮಾಡಿದರು. ಈಗ, ತಂತ್ರಜ್ಞಾನ ಕೂಡ ಕಾಪಿಪೇಸ್ಟ್ ಆಗಿದೆ’ಎಂದು ವ್ಯಂಗ್ಯ ಮಾಡಿದ್ದಾರೆ.
ಮೋದಿ ಸರ್ಕಾರವು 'ಮೇಕ್ ಇನ್ ಇಂಡಿಯಾ' ಬದಲಿಗೆ 'ಫೇಕ್ ಇನ್ ಇಂಡಿಯಾ'ದಲ್ಲಿ ನಂಬಿಕೆ ಇಟ್ಟಿದೆ ಎಂದು ಕುಟುಕಿದ್ದಾರೆ.
ಎಐ ಇಂಪ್ಯಾಕ್ಟ್ ಶೃಂಗಸಭೆಯಂತಹ ಪ್ರಮುಖ ವೇದಿಕೆಯಲ್ಲಿ ಈ ಘಟನೆ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿದೆ ಎಂದು ಅವರು ಹೇಳಿದ್ದಾರೆ.
ಚೀನಾದಲ್ಲಿ ತಯಾರಾದ ರೊಬೊ ನಾಯಿಯನ್ನು ತಮ್ಮದೆಂದು ಹೇಳಿಕೊಂಡ ಖಾಸಗಿ ಸಂಸ್ಥೆಯು ಬಿಜೆಪಿಗೆ ಸಂಬಂಧಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
‘ಎಐ ಇಂಪ್ಯಾಕ್ಟ್ ಶೃಂಗದಲ್ಲಿ ಬಿಜೆಪಿಗೆ ಸಂಬಂಧಿಸಿದ ಸಂಸ್ಥೆಯು ಚೀನಾದ ರೋಬೊ ಅನ್ನು 'ಭಾರತೀಯ ನಾವೀನ್ಯತೆ' ಎಂದು ಬಿಂಬಿಸಿತ್ತು. ಚೀನಾದ ಮಾಧ್ಯಮಗಳು ಕೂಡಲೇ ಅದನ್ನು ಬಯಲು ಮಾಡಿದವು. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗಿದೆ. ನಾಯಕನಂತೆ ಅವನ ಅನುಯಾಯಿಗಳೂ ಇರುತ್ತಾರೆ’ ಎಂದಿದ್ದಾರೆ.
ಈ ಘಟನೆಯಿಂದಾಗಿ ಭಾರತದ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದ್ದು, ನಿಜಕ್ಕೂ ನಾಚಿಕೆಗೇಡು ಎಂದಿದ್ದಾರೆ.
ರೋಬೊಡಾಗ್ ವಿವಾದ ಏನು?
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗದಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ತಮ್ಮದೇ ಇನ್ನೋವೇಶನ್ ಎಂದು ಹೇಳಲಾದ ‘ಓರಿಯನ್’ ಎಂಬ ರೋಬೊಡಾಗ್ ಅನ್ನು ಪ್ರಸ್ತುತಪಡಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡಿದ ನಂತರ ಅದು ಚೀನಾ ಸಂಸ್ಥೆ ಯುನಿಟ್ರೀ ನಿರ್ಮಿಸಿದ ಜಿಒ2 ಮಾದರಿಯನ್ನು ಹೋಲುತ್ತದೆ ಎಂದು ಅನೇಕರು ಗಮನಸೆಳೆದಿದ್ದರು. ಇದು ಸುಮಾರು 2–3 ಲಕ್ಷ ರೂಪಾಯಗೆ ಖರೀದಿಸಲು ಲಭ್ಯವಿದೆ ಎಂದು ಹೇಳಿದ್ದರು.
ಭಾರಿ ಟೀಕೆಗಳ ನಂತರ, ವಿಶ್ವವಿದ್ಯಾನಿಲಯವು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, ರೋಬೊ ನಾಯಿಯನ್ನು ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಸಾಧನವನ್ನು ಚೀನೀ ಸಂಸ್ಥೆಯಿಂದ ಖರೀದಿಸಲಾಗಿದೆ. ವಿದ್ಯಾರ್ಥಿಗಳು ರೋಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಅನ್ವೇಷಿಸಲು ಸಹಾಯ ಮಾಡಲು ಸೂಚನಾ ಸಾಧನವಾಗಿ ಬಳಸಲಾಗುತ್ತಿದೆ ಎಂದು ಅದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.